ಮಂಗಳೂರು: ಎಂಆರ್‌ಪಿಎಲ್ ಹಸಿರು ವಲಯ ಭೂಸ್ವಾಧೀನ ವಿಳಂಬ—ಮೇ 1ರಿಂದ ಧರಣಿ ಎಚ್ಚರಿಕೆ

ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಹಸಿರು ವಲಯ ನಿರ್ಮಾಣಕ್ಕೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯನ್ನು ಹಿಂದಿನ ತೀರ್ಮಾನದಂತೆ ಜಿಲ್ಲಾಡಳಿತದ ಮೂಲಕವೇ ತಕ್ಷಣ ಆರಂಭಿಸಬೇಕು. ಒಂದು ವಾರದೊಳಗೆ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದಲ್ಲಿ ಮೇ 1ರಿಂದ ಎಂಆರ್‌ಪಿಎಲ್ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಜೋಕಟ್ಟೆ ನಾಗರಿಕ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಬುಧವಾರ ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮಾತನಾಡಿ, ಎಂಆರ್‌ಪಿಎಲ್ ಮೂರನೇ ಹಂತದ ಕೋಕ್ ಸಲ್ಪರ್ ಘಟಕದಿಂದ ಉಂಟಾಗುತ್ತಿರುವ ಮಾಲಿನ್ಯ ತಡೆಗೆ ರಾಜ್ಯ ಸರ್ಕಾರ ಆರು ಅಂಶಗಳ ಕಾರ್ಯಕ್ರಮ ಜಾರಿಗೆ ಸೂಚಿಸಿತ್ತು. ಅವುಗಳಲ್ಲಿ ಐದು ಅಂಶಗಳನ್ನು ಕಂಪನಿ ಭಾಗಶಃ ಜಾರಿಗೊಳಿಸಿದರೂ, ಪ್ರಮುಖವಾದ ಹಸಿರು ವಲಯ ನಿರ್ಮಾಣಕ್ಕೆ ಅಗತ್ಯವಾದ 27 ಎಕರೆ ಭೂಸ್ವಾಧೀನ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದೆ ಎಂದು ಆರೋಪಿಸಿದರು.

ಕಂಪನಿ ಮತ್ತು ಜನವಸತಿ ನಡುವಿನ ಹೆಚ್ಚು ಬಾಧಿತ ಪ್ರದೇಶದಲ್ಲಿ ಭೂಸ್ವಾಧೀನ ಮಾಡಿ ಹಸಿರು ವಲಯ ನಿರ್ಮಿಸುವುದು ಹಾಗೂ ಜಮೀನು ಮತ್ತು ವಸತಿ ಕಳೆದುಕೊಳ್ಳುವವರಿಗೆ ಕೈಗಾರಿಕಾ ಭೂಸ್ವಾಧೀನ ನಿಯಮಗಳಂತೆ ಪುನರ್ವಸತಿ ಕಲ್ಪಿಸುವುದು ಅನಿವಾರ್ಯ. ಈ ಸಂಬಂಧ ಐದು ವರ್ಷಗಳ ಹಿಂದೆ ಭೂ ಗುರುತಿಸುವ ಕಾರ್ಯ ಪೂರ್ಣಗೊಂಡಿದ್ದರೂ, ಪರಿಹಾರ ಪ್ಯಾಕೇಜ್ ಹಾಗೂ ಸವಲತ್ತುಗಳ ವಿಷಯದಲ್ಲಿ ನಿರಂತರ ವಿಳಂಬ ನಡೆದಿದೆ ಎಂದು ಅವರು ಹೇಳಿದರು.

‘ಒನ್ ಟೈಂ ಸೆಟಲ್‌ಮೆಂಟ್’ಗೆ ಸಂತ್ರಸ್ತರು ಒಪ್ಪಿಗೆ ನೀಡಿದ ನಂತರ ಜಿಲ್ಲಾಡಳಿತದ ಮಧ್ಯಸ್ಥಿಕೆಯಲ್ಲಿ ನೇರವಾಗಿ ಪರಿಹಾರ ನೀಡಿ ಭೂಸ್ವಾಧೀನ ನಡೆಸುವುದಾಗಿ ಕಂಪನಿ ತಿಳಿಸಿತ್ತು. ಆದರೆ ಈಗ ಕೆಐಎಡಿಬಿ ಮೂಲಕ ಪ್ರಕ್ರಿಯೆ ನಡೆಸಲು ಮುಂದಾಗಿದ್ದು, ಸೇವಾ ಶುಲ್ಕ ಮನ್ನಾ ಮಾಡುವಂತೆ ಮನವಿ ಸಲ್ಲಿಸಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸಮಿತಿ ದೂರಿದೆ.

ಫೆಬ್ರವರಿ 4ರಂದು ಸಂಸದರು, ಶಾಸಕರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪರಿಹಾರ ಪ್ಯಾಕೇಜ್ ಅಂತಿಮಗೊಂಡಿದ್ದು, ಎರಡು ತಿಂಗಳೊಳಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿ ಮಳೆಗಾಲದೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಲಾಗಿತ್ತು. ಆದಾಗ್ಯೂ, ಇದುವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಕೈಗಾರಿಕಾ ಮಾಲಿನ್ಯದಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಗ್ರಾಮಸ್ಥರು ತೀವ್ರ ಆತಂಕದಲ್ಲಿದ್ದು, ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಂತ್ರಸ್ತರಾದ ಮುಹಮ್ಮದ್ ಜಾಬೀರ್, ಶರೀಫ್ ನಿರ್ಮುಂಜೆ, ಇಕ್ಬಾಲ್ ಜೋಕಟ್ಟೆ, ಸಿಲ್ವಿಯಾ ಪೆರೀಸ್, ಕವಿತಾ ಸುವರ್ಣ, ಹಸೈನಾರ್ ಜೋಕಟ್ಟೆ, ಪುಷ್ಪಾ ಜೋಕಟ್ಟೆ, ಸುಂದರಿ ಜೋಕಟ್ಟೆ, ಮರಿಯಂ ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!