ಮಂಗಳೂರು: ಮಹಿಳೆಯರಿಗೆ 50% ಮೀಸಲಾತಿ ನೀಡುವ ಬದಲು, ಕ್ಷೇತ್ರ ಮರುವಿಂಗಡಣೆಯನ್ನು ಜೋಡಿಸುವ ಮೂಲಕ ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಹಾಗೂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಪ್ಪಿ ಆರೋಪಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೂರ್ವ ಚರ್ಚೆಯಿಲ್ಲದೆ ಲೋಕಸಭೆಯಲ್ಲಿ ಮಸೂದೆ ಮಂಡಿಸಿ, ಅದರೊಂದಿಗೆ ಕ್ಷೇತ್ರ ಮರುವಿಂಗಡಣೆಯನ್ನು ಲಿಂಕ್ ಮಾಡಿರುವುದು ರಾಜಕೀಯ ಸಂಚು ಎಂದರು. ಇದರಿಂದ ಮಸೂದೆ ಅಸ್ತಿತ್ವ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಕೇಂದ್ರ ಸರ್ಕಾರದ ರಾಜಕೀಯ ಸೋಲು ಎಂದು ಹೇಳಿದರು.
ಕ್ಷೇತ್ರ ಮರುವಿಂಗಡಣೆ ಜಾರಿಯಾದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಲೋಕಸಭಾ ಸ್ಥಾನಗಳು ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಪ್ಪಿ ಎಚ್ಚರಿಸಿದರು. ಇಂಡಿಯಾ ಒಕ್ಕೂಟ ಒಗ್ಗಟ್ಟಿನಿಂದ ಮಸೂದೆಯನ್ನು ತಡೆದಿಲ್ಲದಿದ್ದರೆ ದಕ್ಷಿಣ ರಾಜ್ಯಗಳ ಧ್ವನಿ ಕುಂಠಿತವಾಗುತ್ತಿತ್ತು ಎಂದರು
.
ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ವಿರುದ್ಧ ಮಹಿಳಾ ವಿರೋಧಿ ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಪಕ್ಷವೇ ಇಂದಿರಾ ಗಾಂಧಿ, ಪ್ರತಿಭಾ ಪಾಟೀಲ್ ಹಾಗೂ ಮೀರಾ ಕುಮಾರ್ ಸೇರಿದಂತೆ ಪ್ರಮುಖ ಮಹಿಳಾ ನಾಯಕತ್ವವನ್ನು ದೇಶಕ್ಕೆ ನೀಡಿದೆ ಎಂದು ಹೇಳಿದರು.
ಮಹಿಳೆಯರು ದೇಶದ ಅರ್ಧ ಜನಸಂಖ್ಯೆ ಹೊಂದಿರುವ ಹಿನ್ನೆಲೆಯಲ್ಲಿ ಯಾವುದೇ ಷರತ್ತುಗಳಿಲ್ಲದೆ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸ್ವರೂಪ, ನೀತಾ, ಸವಿತಾ, ಗೀತಾ ಪ್ರವೀಣ್, ಶಾಂತಲಾ ಗಟ್ಟಿ, ಚಂದ್ರಕಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.