ಮಂಜೇಶ್ವರ: ಅಭಿವೃದ್ಧಿಯ ಹೆಸರಿನಲ್ಲಿ ಜನರ ಮೂಲಭೂತ ಹಕ್ಕನ್ನೇ ಕಸಿದುಕೊಳ್ಳುವುದು ಎಷ್ಟು ಸರಿ? ಮಂಜೇಶ್ವರ ಗ್ರಾಮ ಪಂಚಾಯಿತಿಯ 23ನೇ ವಾರ್ಡ್ ವ್ಯಾಪ್ತಿಯ ಮಾಡ ಕೊಳಕೆ ನಿವಾಸಿಗಳ ಇಂದಿನ ಸ್ಥಿತಿ ನೋಡಿದರೆ ವ್ಯವಸ್ಥೆಯ ಮೇಲೆ ಅಸಹ್ಯ ಹುಟ್ಟದಿರದು. ಕಳೆದ ನಾಲ್ಕು ವರ್ಷಗಳಿಂದ ಕುಡಿಯುವ ನೀರಿಲ್ಲದೆ ಇಲ್ಲಿನ ಕುಟುಂಬಗಳು ನರಕಯಾತನೆ ಅನುಭವಿಸುತ್ತಿದ್ದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ ‘ಕುರುಡಾಗಿ’ ಕುಳಿತಿದ್ದಾರೆ.
ತಲಪಾಡಿಯಿಂದ ಚೆಂಗಳವರೆಗಿನ ರಸ್ತೆ ಕಾಮಗಾರಿ ಆರಂಭವಾದಾಗ ಅಭಿವೃದ್ಧಿಯ ಕನಸು ಕಂಡಿದ್ದ ಜನರಿಗೆ ಇಂದು ಆ ರಸ್ತೆಯೇ ಶಾಪವಾಗಿ ಪರಿಣಮಿಸಿದೆ. ಕಾಮಗಾರಿ ಸಂದರ್ಭದಲ್ಲಿ ಕೇರಳ ಜಲ ಪ್ರಾಧಿಕಾರ ನೀಡಿದ್ದ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು. ರಸ್ತೆ ಕಾಮಗಾರಿ ಮುಗಿದು ನಾಲ್ಕು ವರ್ಷಗಳೇ ಉರುಳಿದರೂ, ಕಡಿತಗೊಂಡ ಸಂಪರ್ಕವನ್ನು ಪುನರ್ ಸ್ಥಾಪಿಸುವ ಕನಿಷ್ಠ ಜವಾಬ್ದಾರಿಯನ್ನು ಯಾವೊಬ್ಬ ಅಧಿಕಾರಿಯೂ ತೋರಿಸುತ್ತಿಲ್ಲ .
ಇಲಾಖೆಯ ಬೇಜವಾಬ್ದಾರಿತನ ಇಲ್ಲಿಗೆ ನಿಂತಿಲ್ಲ. ನಲ್ಲಿಯಲ್ಲಿ ಒಂದು ಹನಿ ನೀರು ಬರದಿದ್ದರೂ, ಪ್ರತಿ ಎರಡು ತಿಂಗಳಿಗೊಮ್ಮೆ ನಿಯಮಿತವಾಗಿ ನೀರಿನ ಬಿಲ್ ಮಾತ್ರ ಮನೆ ಬಾಗಿಲಿಗೆ ತಲುಪುತ್ತಿದೆ! ಅಷ್ಟೇ ಅಲ್ಲದೆ, ನೀರು ಬಳಸದೆ ಬಿಲ್ ಕಟ್ಟದ ಜನರಿಗೆ ಇಲಾಖೆಯು ‘ಜಪ್ತಿ ನೋಟಿಸ್’ ಕಳಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಿದೆ. “ಕುಡಿಯಲು ನೀರು ಕೊಡಿ ಎಂದರೆ ಜಪ್ತಿ ಮಾಡುತ್ತೇವೆ ಎನ್ನುತ್ತಿರುವ ಇಲಾಖೆಯ ಉದ್ಧಟತನಕ್ಕೆ ಕೊನೆಯಿಲ್ಲವೇ?” ಎಂಬುದು ಗ್ರಾಮಸ್ಥರ ಆಕ್ರೋಶಭರಿತ ಪ್ರಶ್ನೆ.
”ದೂರದ ಬಾವಿಗಳಿಂದ ನೀರು ಹೊತ್ತು ತಂದು ಸುಸ್ತಾಗಿದ್ದೇವೆ. ಈಗ ಬಿಸಿಲಿನ ತಾಪಕ್ಕೆ ಆ ಬಾವಿಗಳೂ ಬತ್ತಿ ಹೋಗಿವೆ. ಅಧಿಕಾರಿಗಳಿಗೆ ಮನವಿ ನೀಡಿ ಸಾಕಾಗಿದೆ. ನಮಗೆ ನೀರಿನ ಬಿಲ್ ಬೇಡ, ನೀರು ಕೊಡಿ. ಎಂದು ಸ್ಥಳೀಯರು ತಮ್ಮ ನಿಂದನೆ ತೋಡಿಕೊಂಡಿದ್ದಾರೆ.
ಚುನಾವಣೆ ಬಂದಾಗ ಮತ ಕೇಳಲು ಬರುವ ಜನಪ್ರತಿನಿಧಿಗಳು ಈ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. ಮಾಡ ಕೊಳಕೆ ಜನರ ತಾಳ್ಮೆ ಕಟ್ಟೆ ಒಡೆದಿದೆ. ಇನ್ನಾದರೂ ಅಧಿಕಾರಿಗಳು ಕಡತಗಳನ್ನು ಬಿಟ್ಟು ನೆಲದ ಮೇಲಿರುವ ವಾಸ್ತವವನ್ನು ಗಮನಿಸಿ, ತಕ್ಷಣ ನೀರಿನ ಸಂಪರ್ಕ ಕಲ್ಪಿಸಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ