ಬಿಲ್ಲವ ಬ್ರಿಗೇಡ್–ನಂದಾದೀಪ ಫೌಂಡೇಶನ್ ವತಿಯಿಂದ 14ನೇ ಮತ್ತು 15ನೇ ಮನೆಗಳ ಹಸ್ತಾಂತರ: ಏ.25ರಂದು ‘ಸೇವಾ ಸಂಭ್ರಮ’

ಬಡವರ ಕಣ್ಣೀರು ಒರೆಸುವ ಸಂಕಲ್ಪದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಬಿಲ್ಲವ ಬ್ರಿಗೇಡ್ ಹಾಗೂ ನಂದಾದೀಪ ಫೌಂಡೇಶನ್ ವತಿಯಿಂದ ನಿರ್ಮಿಸಲಾದ 14ನೇ ಮತ್ತು 15ನೇ ಮನೆಗಳ ಹಸ್ತಾಂತರ ಹಾಗೂ ‘ಸೇವಾ ಸಂಭ್ರಮ’ ಕಾರ್ಯಕ್ರಮ ಏಪ್ರಿಲ್ 25ರಂದು ಸಂಜೆ 6 ಗಂಟೆಗೆ ಬಂಟ್ವಾಳ ತಾಲೂಕಿನ ಪಂಬದಬೆಟ್ಟು ಬ್ರಹ್ಮರಕೂಟ್ಟು ಟೋಲ್‌ಗೇಟ್ ಸಮೀಪದ ಕ್ರೀಡಾಂಗಣದಲ್ಲಿ ನಡೆಯಲಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಂದಾದೀಪ ಫೌಂಡೇಶನ್ ಮಂಗಳೂರು ಸ್ಥಾಪಕ ಸದಾನಂದ ಪೂಜಾರಿ ಈ ಕುರಿತು ಮಾಹಿತಿ ನೀಡಿದರು. ಈಗಾಗಲೇ 13 ಮನೆಗಳನ್ನು ನಿರ್ಮಿಸಿ ಹಸ್ತಾಂತರಿಸಿರುವ ಸಾಧನೆಯನ್ನು ಸಂಘಟನೆ ಹೊಂದಿದ್ದು, ಇದೀಗ 14 ಮತ್ತು 15ನೇ ಮನೆಗಳ ಹಸ್ತಾಂತರಕ್ಕೆ ಸಿದ್ಧತೆ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಜಕೀಯ, ಧಾರ್ಮಿಕ ಹಾಗೂ ಚಲನಚಿತ್ರ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ರಾತ್ರಿ 8 ಗಂಟೆಯಿಂದ ಪ್ರಕಾಶ್ ಮಹದೇವನ್, ರೂಪಾ ಪ್ರಕಾಶ್ ಸೇರಿದಂತೆ ಖ್ಯಾತ ಗಾಯಕರ ತಂಡದಿಂದ ‘ಮ್ಯೂಸಿಕಲ್ ಸ್ಟಾರ್ ನೈಟ್’ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳಿಗೆ ಅನುಗುಣವಾಗಿ ಆರಂಭವಾದ ಬಿಲ್ಲವ ಬ್ರಿಗೇಡ್, ಸಮಾಜದ ಬಡವರ ಧ್ವನಿಯಾಗಿ ಬೆಳೆದಿದ್ದು, ಆರ್ಥಿಕ ಸಂಕಷ್ಟದಿಂದ ಅರ್ಧಕ್ಕೆ ನಿಂತ ಮನೆಗಳನ್ನು ಪೂರ್ಣಗೊಳಿಸಿ ಸೂರು ಒದಗಿಸುವ ಕಾರ್ಯ ಮಾಡುತ್ತಿದೆ. ಜೊತೆಗೆ ಬಡ ವಿದ್ಯಾರ್ಥಿಗಳಿಗೆ ಅಮೆರಿಕಾ, ಲಂಡನ್, ಆಸ್ಟ್ರೇಲಿಯಾ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಾಯ ನೀಡಲಾಗುತ್ತಿದೆ ಎಂದು ಹೇಳಿದರು.

ಕೋವಿಡ್ ಅವಧಿಯಲ್ಲಿ 4,500ಕ್ಕೂ ಅಧಿಕ ಕಿಟ್‌ಗಳನ್ನು ವಿತರಿಸಿ, 800 ಯುನಿಟ್‌ಗೂ ಹೆಚ್ಚು ರಕ್ತದಾನ ಮಾಡುವ ಮೂಲಕ ಸಂಘಟನೆಯು ಮಾನವೀಯ ಸೇವೆಯಲ್ಲಿ ಗುರುತಿಸಿಕೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಬ್ರಿಗೇಡ್ ಸ್ಥಾಪಕ ಸದಸ್ಯರಾದ ಅನ್ವಿತ್ ಕಟೀಲ್, ಪ್ರಶಾಂತ್ ಮಂಗಳಾದೇವಿ, ಕಾರ್ಯಾಧ್ಯಕ್ಷ ನಿಶಾನ್ ಪೂಜಾರಿ, ಸಜಿಪ ಮೂಡ ಬಾಲಗಣಪತಿ ದೇವಸ್ಥಾನದ ಮೊಕ್ತಸರ ಯಶವಂತ ದೇರಾಜೆ ಹಾಗೂ ನಾರಾಯಣ ಗುರು ಯುವ ವೇದಿಕೆಯ ಸುಧಾಕರ ಕರ್ಕೇರ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!