ಯಕ್ಷಗಾನ ಕಲೆಯ ಅಭಿವೃದ್ದಿಗೆ ಸಮರ್ಪಿತವಾಗಿ ಕಾರ್ಯನಿರ್ವಹಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.), ಮಂಗಳೂರು ಇದರ ವತಿಯಿಂದ 11ನೇ ವರ್ಷದ ‘ಪಟ್ಲ ಸಂಭ್ರಮ 2026’ ಕಾರ್ಯಕ್ರಮವು ಮೇ 30ರಂದು ಶನಿವಾರ ಅಡ್ಯಾರ್ ಸಮೀಪದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆಯಲಿದೆ ಎಂದು ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಪಾವಂಜೆ ನಾಗವೃಜ ಕ್ಷೇತ್ರದ ಧರ್ಮಧರ್ಶಿ ಡಾ. ಯಾಜಿ ನಿರಂಜನ ಭಟ್ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 8.30ಕ್ಕೆ ಚೌಕಿ ಪೂಜೆ ಮತ್ತು ಅಬ್ಬರ ತಾಳದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ಭರತನಾಟ್ಯ, ಯೋಗ ಪ್ರದರ್ಶನ, ಮಹಿಳಾ ಯಕ್ಷಗಾನ, ಯಕ್ಷಗಾನ ಹಾಸ್ಯ ವೈಭವ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ 2026ನೇ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಡಾ. ಎಂ. ಮೋಹನ್ ಆಳ್ವ ಅವರಿಗೆ ಪ್ರದಾನ ಮಾಡಲಾಗುವುದು. ಪಟ್ಲ ಪ್ರಶಸ್ತಿಯನ್ನು ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರಿಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಬೆಳಿಗ್ಗೆ 11 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಹಾಗೂ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಮುಂಬೈ ಹೇರಂಭ ಇಂಡಸ್ಟ್ರೀಸ್ ಅಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕನ್ಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಎಂಆರ್‌ಜಿ ಗ್ರೂಪ್ ಬೆಂಗಳೂರು ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.
16 ಕೋಟಿ ರೂ. ಸೇವಾ ಕಾರ್ಯ:
ಕಳೆದ 11 ವರ್ಷಗಳಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸುಮಾರು 16 ಕೋಟಿ ರೂ. ಮೌಲ್ಯದ ವಿವಿಧ ಸೇವಾ ಕಾರ್ಯಗಳನ್ನು ಕೈಗೊಂಡಿದೆ. ಪಟ್ಲ ಪ್ರಶಸ್ತಿ, ಯಕ್ಷಾಶ್ರಯ ಮನೆ ನಿರ್ಮಾಣ, ಗೃಹ ದುರಸ್ತಿ ನೆರವು, ಗೌರವಧನ, ಅಪಘಾತ ವಿಮೆ ಯೋಜನೆ ಸೇರಿದಂತೆ ಹಲವು ಕಲಾವಿದರ ಕಲ್ಯಾಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ.
ಅಂತರರಾಷ್ಟ್ರೀಯ ಮಾನ್ಯತೆ:
ಅಮೇರಿಕಾದ ಅರಿಜೋನಾ ಹಾಗೂ ಮಿಲ್ವಾಕಿ ನಗರಗಳಲ್ಲಿ ‘Yakshadhruva Patla Foundation Day’ ಘೋಷಣೆಯ ಮೂಲಕ ಫೌಂಡೇಶನ್‌ಗೆ ಅಂತರರಾಷ್ಟ್ರೀಯ ಮಾನ್ಯತೆ ದೊರೆತಿದೆ.
ಯಕ್ಷಶಿಕ್ಷಣ ಯೋಜನೆ:
ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯಡಿ 51 ಶಿಕ್ಷಕರ ಮೂಲಕ 89 ಶಾಲೆಗಳ 13,248 ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಲಾಗುತ್ತಿದ್ದು, ಈಗಾಗಲೇ 5,234 ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಫೌಂಡೇಶನ್ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ, ಪ್ರತಿವರ್ಷವೂ ಉತ್ತಮ ಜನಸ್ಪಂದನೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ಮುಂದಿನ ದಿನಗಳಲ್ಲಿ 13 ಸಾವಿರ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಯಕ್ಷಗಾನ ಕರಾವಳಿಯ ಅಪರೂಪದ ಕಲೆ ಆಗಿದ್ದು, ಪುರಾಣ ಮತ್ತು ಮಹಾಕಾವ್ಯಗಳ ಕಥಾರೂಪ, ಸಂಗೀತ ಹಾಗೂ ನೃತ್ಯದ ಸಂಯೋಜನೆಯಾಗಿದೆ. ಈ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಫೌಂಡೇಶನ್ ಮಹತ್ತರ ಕೊಡುಗೆ ನೀಡುತ್ತಿದೆ ಎಂದರು.
ಇದೀಗ 45 ಯಕ್ಷಧ್ರುವ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಕಲಾವಿದರಿಗೆ ಸನ್ಮಾನ, ಗೃಹ ನಿರ್ಮಾಣ, ಆರೋಗ್ಯ ವಿಮೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಬಾರಿ ಸಮುದ್ರಯಾನದ ಮೂಲಕ ಯಕ್ಷಗಾನ ಪ್ರದರ್ಶನ ಮಾಡುವ ಯೋಜನೆಯೂ ರೂಪಿಸಲಾಗಿದೆ ಎಂದು ತಿಳಿಸಿದರು.
ಹಿಂದೆ ಕನ್ನಡಕ್ಕೆ ಮಾತ್ರ ಸೀಮಿತವಾಗಿದ್ದ ಯಕ್ಷಗಾನ ಇದೀಗ ಮೊದಲಿಗೆ ತುಳು ನಂತರ ಹಿಂದಿ, ಇಂಗ್ಲಿಷ್ ಭಾಷೆಗಳಲ್ಲೂ ಪ್ರದರ್ಶನ ಕಂಡು ಜಾಗತಿಕ ಮಟ್ಟದಲ್ಲಿ ಪಸರಿಸಿ ಜಾಗತೀಕರಣಗೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿಎ. ಉದಯಕುಮಾರ್ ಶೆಟ್ಟಿ, ಅರತಿ ರಾಮಚಂದ್ರ ಅಳ್ವ, ಸೀತಾರಾಮ್ ರೈ ಸವಣೂರು, ಪ್ರಭಾಕರ ಜೋಷಿ, ಭುಜಬಲಿ ಧರ್ಮಸ್ಥಳ, ಪ್ರದೀಪ್ ಅಳ್ವ ಕದ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.