ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಶುಭಹಾರೈಸಿದ ಮಂಜುನಾಥ ಭಂಡಾರಿ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅದರಲ್ಲೂ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ತಮ ಅಂಕಗಳನ್ನು ಗಳಿಸಿ ತೋರಿದ ಅಪ್ರತಿಮ ಸಾಧನೆಗೆ ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಮಂಜುನಾಥ ಭಂಡಾರಿ ಅವರು ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭಕೋರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಎಸ್‌ಎಸ್‌ಎಲ್‌ಸಿ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಅತ್ಯಂತ ಮಹತ್ವದ ಘಟ್ಟವಾಗಿದೆ. ಇಲ್ಲಿನ ಸಾಧನೆಯು ಅವರ ಮುಂದಿನ ಉನ್ನತ ಶಿಕ್ಷಣ ಮತ್ತು ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಡುತ್ತದೆ. ಸರ್ಕಾರಿ ಶಾಲೆಯ ಮಕ್ಕಳು ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆಯ ಹಾದಿಯಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಷಯ“ ಎಂದಿದ್ದಾರೆ.

ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ಭವಿಷ್ಯದಲ್ಲಿ ಉತ್ತಮ ಗುಣನಡತೆಯುಳ್ಳ ಸತ್ಪ್ರಜೆಗಳಾಗಬೇಕು. ಈ ಮೂಲಕ ರಾಜ್ಯ ಮತ್ತು ದೇಶದ ಕೀರ್ತಿ ಪತಾಕೆಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿ ಹಿಡಿಯಬೇಕು. ಸಮಾಜಕ್ಕೆ ಮಾದರಿಯಾಗುವಂತಹ ಸಾಧನೆ ಮಾಡುವ ಮೂಲಕ ನಾಡಿನ ಗೌರವವನ್ನು ಇನ್ನಷ್ಟು ಹೆಚ್ಚಿಸಲಿ ಎಂದು ಅವರು ಆಶಿಸಿದರು.

ವಿದ್ಯಾರ್ಥಿಗಳ ಈ ಯಶಸ್ಸಿನ ಹಿಂದೆ ಶ್ರಮಿಸಿದ ಪೋಷಕರು ಮತ್ತು ಶಿಕ್ಷಕರಿಗೂ ಅಭಿನಂದನೆ ಸಲ್ಲಿಸಿದ ಮಂಜುನಾಥ ಭಂಡಾರಿ ಅವರು, ಪ್ರತಿಯೊಬ್ಬ ಮಗುವೂ ದೇಶದ ಅಮೂಲ್ಯ ಆಸ್ತಿಯಾಗಿ ಬೆಳೆಯಲಿ ಎಂದು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಶುಭಹಾರೈಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!