ಮಂಜೇಶ್ವರದಲ್ಲಿ ಭಾರಿ ಡ್ರಗ್ಸ್ ಬೇಟೆ: 50 ಗ್ರಾಂ ಎಂಡಿಎಂಎ ಸಹಿತ ಮೂವರು ಯುವಕರ ಬಂಧನ

​ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ನಿಷೇಧಿತ ಮಾದಕ ದ್ರವ್ಯ ಎಂಡಿಎಂಎ ಸಹಿತ ಮೂವರು ಯುವಕರನ್ನು ಮಂಜೇಶ್ವರ ಪೊಲೀಸರು ಮತ್ತು ವಿಶೇಷ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭಾರತ್ ರೆಡ್ಡಿ ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆಸಲಾಗಿದೆ.


ಕಾಸರಗೋಡು ಆಲಂಪಾಡಿ ಟಿಪ್ಪು ನಗರ ನಿವಾಸಿ ​ಸಿ.ಎ. ಮೊಹಮ್ಮದ್ ಸಹಲ್, ಎರ್ನಾಕುಲಂ ನಾರ್ತ್ ಪರವೂರು ನಿವಾಸಿ ಅರುಣ್ ಕುಮಾರ್ ಹಾಗೂ ಕೋಝಿಕೋಡ್ ವಡಕರ ಪುತ್ತೂರು ನಿವಾಸಿ ಎಂ.ಪಿ. ಅನುಷ್ ಬಂಧಿತ ಆರೋಪಿಗಳು.

​ಮಂಜೇಶ್ವರದ ಪಾವೂರು ಸ್ನೇಹಾಲಯದ ಸಮೀಪ ಪೊಲೀಸರು ಹದ್ದಿನ ಕಣ್ಣಿಟ್ಟು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸಂಶಯಾಸ್ಪದವಾಗಿ ಬಂದ ಸ್ವಿಫ್ಟ್ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ, ಕಾರಿನೊಳಗೆ ಬಚ್ಚಿಟ್ಟಿದ್ದ 50 ಗ್ರಾಂ ಎಂಡಿಎಂಎ ಪತ್ತೆಯಾಗಿದೆ.

​ವಶಪಡಿಸಿಕೊಳ್ಳಲಾದ ಈ ಮಾದಕ ದ್ರವ್ಯಕ್ಕೆ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯವಿದೆ ಎಂದು ಅಂದಾಜಿಸಲಾಗಿದೆ. ಮಂಜೇಶ್ವರ ಪೊಲೀಸರು ಮತ್ತು ಜಿಲ್ಲಾ ಡ್ರಗ್ಸ್ ವಿರೋಧಿ ತಂಡ ಜಂಟಿಯಾಗಿ ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದೆ.

​ಈ ಡ್ರಗ್ಸ್ ಜಾಲದ ಹಿಂದೆ ಬೇರೆ ಯಾರಿದ್ದಾರೆ ಮತ್ತು ಈ ಮಾದಕ ದ್ರವ್ಯವನ್ನು ಎಲ್ಲಿಂದ ತರಲಾಗಿದೆ ಎಂಬ ಬಗ್ಗೆ ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ

SHARE
Loading spinner

Leave a Reply

Your email address will not be published. Required fields are marked *

error: Content is protected !!