ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ತು ಹಾಗೂ ಮಂಗಳೂರು ಮಹಾನಗರ ಆಟೋರಿಕ್ಷಾ ಚಾಲಕರ-ಮಾಲೀಕರ ಸಂಘದ ವತಿಯಿಂದ ಮೇ 1ರಂದು “ಕಾರ್ಮಿಕ ದಿನಾಚರಣೆ”ಯನ್ನು ಹಂಪನಕಟ್ಟೆಯ ತಾಜ್ ಮಹಲ್ ಆಟೋ ಪಾರ್ಕ್ ನಲ್ಲಿ ಬೆಳಿಗ್ಗೆ 10:30 ರಿಂದ ನಡೆಯಲಿದೆ ಎಂದು ಶಾಸಕ ಐವನ್ ಡಿಸೋಜಾ ತಿಳಿಸಿದ್ದಾರೆ .
ಅವರು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಈ ಸಮಾರಂಭದಲ್ಲಿ ಕಾರ್ಮಿಕರಿಗೆ ಸನ್ಮಾನ ಹಾಗೂ ವಿವಿಧ ಸೌಲಭ್ಯಗಳ ವಿತರಣೆ ನಡೆಯಲಿದ್ದು ಪ್ರಮುಖವಾಗಿ ಕಾರ್ಮಿಕರಿಗೆ ೨೮೦ ಸ್ಮಾರ್ಟ್ ಕಾರ್ಡ್ ವಿತರಣೆ ನಡೆಯಲಿದೆ . ಈ ಸ್ಮಾರ್ಟ್ ಕಾರ್ಡ್ ಒಂದು ಲಕ್ಷದವರೆಗೆ ಚಿಕಿತ್ಸಾ ವೆಚ್ಚವನ್ನು ಭರಿಸಲಿದೆ , ಚಾಲಕ ಅಪಘಾತದಲ್ಲಿ ಮರಣ ಹೊಂದಿದರೆ ೫ ಲಕ್ಷ ಪರಿಹಾರ , ಅಪಘಾತದಿಂದ ಅಂಗ ವೈಫಲ್ಯತೆ ಉಂಟಾದಲ್ಲಿ ೨.೫ ಲಕ್ಷದ ಪರಿಹಾರ ಸಿಗಲಿದೆ ಎಂದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯರು ಹಾಗೂ ಕಾರ್ಮಿಕ ಪರಿಷತ್ತಿನ ಅಧ್ಯಕ್ಷರಾದ ಐವನ್ ಡಿಸೋಜಾ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಂಗಳೂರು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕೆ. ರವಿಶಂಕರ್ ಅವರು ಆಗಮಿಸಲಿದ್ದಾರೆ.
ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಕಾರ್ಮಿಕ ಅಧಿಕಾರಿ (ವಿಭಾಗ-2) ವಿಲ್ಮಾ ತೌರೊ ಉಪಸ್ಥಿತರಿರಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಾರ್ಪೊರೇಟರ್ ನಾಗೇಂದ್ರ ಕುಮಾರ್, ಆಟೋ ಚಾಲಕರಾದ ರಾಜೇಶ್, ಇಸ್ಮಾಯಿಲ್, ಮ್ಯಾಕ್ಸಿ ಮಿರಾಂಡ ಮತ್ತು ಅನಿಲ್ ಲೋಬೋ ಉಪಸ್ಥಿತರಿದ್ದರು .