ಬನ್ನೂರಿನಲ್ಲಿ ಸುವರ್ಣ ಮಹೋತ್ಸವ: ಮೇ 7ರಿಂದ ಧಾರ್ಮಿಕ ಕಾರ್ಯಕ್ರಮ, ಅಂತರ್‌ರಾಜ್ಯ ದಫ್ ಸ್ಪರ್ಧೆ

ಪುತ್ತೂರು; ಧಾರ್ಮಿಕ ಜಾಗೃತಿ ಹಾಗೂ ಸಾಂಪ್ರದಾಯಿಕ ಕಲಾಪ್ರಕಾರಗಳನ್ನು ಉಳಿಸಿಕೊಳ್ಳುವ ಉದ್ದೇಶದೊಂದಿಗೆ ಬನ್ನೂರು ದಖೀರತುಲ್ ಉಖ್ರಾ ಯಂಗ್ ಮೆನ್ಸ್ ಅಸೋಸಿಯೇಶನ್ ಸಂಸ್ಥೆ ತನ್ನ 50ನೇ ವರ್ಷದ ಸುವರ್ಣಮಹೋತ್ಸವ ಆಚರಣೆ ಪ್ರಯುಕ್ತ ಮೇ.7ರಿಂದ 9 ತನಕ 3 ದಿನಗಳ ಧಾರ್ಮಿಕ ಕಾರ್ಯಕ್ರಮ ಹಾಗೂ ಅಂತರ್‍ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಅಝರ್ ಬನ್ನೂರು ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಇಂದಿನ ಯುವಜನತೆಯನ್ನು ಅನೈತಿಕ ಚಟುವಟಿಕೆಗಳು, ಡ್ರಗ್ಸ್ ಮುಂತಾದ ತಪ್ಪು ಹಾದಿಗಳಿಂದ ದೂರ ಮಾಡುವ ನಿಟ್ಟಿನಲ್ಲಿ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯಗೊಳಿಸುವ ಪ್ರಯತ್ನ ಇದಾಗಿದೆ. 1977ರಲ್ಲಿ ಆರಂಭಗೊಂಡ ಈ ಸಂಸ್ಥೆ ಇಂತಹ ಸಾಮಾಜಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಮೇ.7ರ ರಾತ್ರಿ 7.30ರಿಂದ ಸ್ವಲಾತ್ ವಾರ್ಷಿಕೋತ್ಸವ ನಡೆಯಲಿದ್ದು, ಬಿಜೆಎಂ ಬನ್ನೂರು ಅಧ್ಯಕ್ಷ ಕಲಂದರ್ ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಎಂ ಖತೀಬ್ ಸಿರಾಜುದ್ದೀನ್ ಸಖಾಫಿ ಕನ್ಯಾನ ಉದ್ಘಾಟಿಸಲಿದ್ದಾರೆ. ಅಸಯ್ಯದ್ ಶಿಹಾಬುದ್ದೀನ್ ಅಲ್ ಅಹ್ದಲ್ ತಂಙಳ್ ಮುತ್ತನ್ನೂರು ಕೇರಳ ಅವರು ದುವಾ ಹಾಗೂ ಪ್ರಭಾಷಣ ಮಾಡಲಿದ್ದಾರೆ.

ಮೇ.8ರಂದು ರಾತ್ರಿ 7.30ರಿಂದ ಆಕರ್ಷಕ ಬುರ್ದಾ ಮಜ್ಲಿಸ್ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಂಗ್ ಮೆನ್ಸ್ ಅಸೋಸಿಯೇಶನ್ ಅಧ್ಯಕ್ಷ ಅಝರ್ ಬನ್ನೂರು ವಹಿಸಲಿದ್ದಾರೆ. ಸಿರಾಜುದ್ದೀನ್ ಸಖಾಫಿ ಕನ್ಯಾನ ದುವಾ ಆಶೀರ್ವಚನ ನೀಡಲಿದ್ದಾರೆ. ಮಸ್ಹೂದ್ ಸಅದಿ ಸಂಗಡಿಗರಿಂದ ಬುರ್ದಾ ಆಲಾಪನೆ ನಡೆಯಲಿದೆ. ಅತಾವುಲ್ಲಾ ಹಿಮಮಿ ಸಖಾಫಿ ಪ್ರಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಅಂತಾರಾಜ್ಯ ದಫ್ ಸ್ಪರ್ಧೆ
ಮೇ.9 ರಾತ್ರಿ 7.30ರಿಂದ ಕೇರಳ ಮತ್ತು ಕರ್ನಾಟಕದ ತಂಡಗಳಿಂದ ಆಕರ್ಷಕ ದಫ್ ಸ್ಪರ್ಧೆ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಅಶ್ರಫ್ ಕೆ.ಎಂ ವಹಿಸಲಿದ್ದಾರೆ. ಬಳ್ಳಾರಿ ಜಾಮಿಯ ಸುನ್ನಿ ಮಜ್ಜಿದ್ ಖತೀಬ್ ಆಮಿರ್ ಅಶ್‍ಅರೀ ಬನ್ನೂರು ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ ವಿಚಾರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ದಫ್ ಸ್ಪರ್ಧೆಯ ಪ್ರಥಮಸ್ಥಾನಿಗೆ ರೂ.13313 ಮತ್ತು ಟ್ರೋಫಿ, ದ್ವಿತೀಯಸ್ಥಾನಿಗೆ ರೂ.7313 ಮತ್ತು ಟ್ರೋಫಿ, ತೃತೀಯ ಸ್ಥಾನಿಗೆ ರೂ.4313 ಹಾಗೂ ಟ್ರೋಫಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಯಂಗ್ ಮೆನ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಸಾಬಿರ್ ಬನ್ನೂರು, ಸಂಘಟನಾ ಕಾರ್ಯದರ್ಶಿ ರಸೀಕ್ ಬನ್ನೂರು, ಸದಸ್ಯರಾದ ಇಫಾಜ್ ಬನ್ನೂರು, ಹರ್ಷದ್ ಉನೈಸ್, ಆಸೀಫ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!