ಶಿವರಾಮ ಕಾಸರಗೋಡು ಅವರಿಗೆ ಪ್ರತಿಷ್ಠಿತ ಕರ್ನಾಟಕ ಗಡಿನಾಡು ಸಂಘಟನಾ ಪ್ರಶಸ್ತಿ ಪ್ರದಾನ

ಕಾಸರಗೋಡು/ಬೆಂಗಳೂರು, ಜೂ.12: ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಮೂರುವರೆ ದಶಕಕ್ಕೂ ಹೆಚ್ಚು ಕಾಲ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕಾಸರಗೋಡು ಕನ್ನಡ ಗ್ರಾಮದ ಸಂಸ್ಥಾಪಕ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಅಧ್ಯಕ್ಷ ಶಿವರಾಮ ಕಾಸರಗೋಡು ಅವರಿಗೆ ಪ್ರತಿಷ್ಠಿತ “ಕರ್ನಾಟಕ ಗಡಿನಾಡು ಸಂಘಟನಾ ಪ್ರಶಸ್ತಿ” ಪ್ರದಾನ ಮಾಡಲಾಗಿದೆ.

ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಜೂನ್ 8ರಿಂದ 10ರವರೆಗೆ ವಿ.ಕೆ.ಎಂ. ಕಲಾವಿದರು (ರಿ.) ಬೆಂಗಳೂರು ನೇತೃತ್ವದಲ್ಲಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಮ್ ಸ್ಮಾರಕ ನಾಟಕೋತ್ಸವ, ಸಾಂಸ್ಕೃತಿಕ ಕಲಾಮೇಳ ಮತ್ತು ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್, ಮಧುರ ಅಶೋಕ್ ಕುಮಾರ್ ಹಾಗೂ ವಿ.ಕೆ.ಎಂ. ಕಲಾವಿದರು (ರಿ.) ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಸಿ.ಎಂ. ತಿಮ್ಮಯ್ಯ ಉಪಸ್ಥಿತರಿದ್ದರು.

ಶಿವರಾಮ ಕಾಸರಗೋಡು ಅವರು 1990ರಲ್ಲಿ ಸ್ಥಾಪಿಸಿದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಕಾಸರಗೋಡು ಕನ್ನಡ ಗ್ರಾಮದಲ್ಲಿ ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಪ್ರತಿಷ್ಠಾನದ 35ನೇ ಸಂಸ್ಥಾಪನಾ ವರ್ಷಾಚರಣೆಯ ಅಂಗವಾಗಿ 2026ರ ನವೆಂಬರ್ 7 ಮತ್ತು 8ರಂದು ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ–2026, ಕೇರಳ–ಕರ್ನಾಟಕ ಉತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಕೇರಳ, ಕರ್ನಾಟಕ ಹಾಗೂ ದೇಶದ ವಿವಿಧ ರಾಜ್ಯಗಳಿಂದ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.

ಕಾಸರಗೋಡು ಕನ್ನಡ ಗ್ರಾಮದಲ್ಲಿ ಸುಮಾರು 6 ಕೋಟಿ ರೂಪಾಯಿ ವೆಚ್ಚದ ಕೇರಳ–ಕರ್ನಾಟಕ ಭವನ ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣ ಯೋಜನೆ ರೂಪಿಸಲಾಗಿದ್ದು, 2026ರ ನವೆಂಬರ್ 4ರಂದು ಶಿಲಾನ್ಯಾಸ ನೆರವೇರಿಸಲಾಗುವುದು. ಅಲ್ಲದೆ ಕೃಷಿ ಕುಟೀರ, ಕಾಸರಗೋಡು ಗೋ-ಕುಟೀರ, ಕಾಮಧೇನು–ಕಲ್ಪವೃಕ್ಷ ಗೋ ವಿಶ್ರಾಂತಿ ಗೃಹ, ಸಾಂಸ್ಕೃತಿಕ ಭವನ, ಬಯಲು ರಂಗಮಂಟಪ, ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯ, ಮಹಿಳಾ ಸ್ವ ಉದ್ಯೋಗ ತರಬೇತಿ ಕೇಂದ್ರ, ಗ್ರಾಮೀಣ ಕ್ಲಿನಿಕ್ ಹಾಗೂ ಇತರ ಸಾರ್ವಜನಿಕ ಸೇವಾ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಶಿವರಾಮ ಕಾಸರಗೋಡು ಅವರ ಈ ಸಾಧನೆ ಗಡಿನಾಡಿನಲ್ಲಿ ಕನ್ನಡದ ಉಳಿವು, ಬೆಳವಣಿಗೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡಿದ ಮಹತ್ವದ ಕೊಡುಗೆಯಾಗಿ ಪರಿಗಣಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!