ಮಂಜೇಶ್ವರ: ಮಂಜೇಶ್ವರದ ಅಭಿವೃದ್ಧಿಯ ಹರಿಕಾರ, ತುಳುನಾಡಿನ ಕಮ್ಯುನಿಷ್ಟ್ ಚಳುವಳಿಯ ಅಗ್ರಗಣ್ಯ ನೇತಾರ ಹಾಗೂ ಮಂಜೇಶ್ವರದ ಮಾಜಿ ಶಾಸಕ ಕಾಮ್ರೇಡ್ ಎಂ. ರಾಮಪ್ಪ ಮಾಸ್ಟರ್ ಅವರ 35ನೇ ಸಂಸ್ಮರಣಾ ಸಮ್ಮೇಳನವು ಮಂಜೇಶ್ವರದ ಥೋಮಸ್ ಸಭಾಂಗಣದಲ್ಲಿ ಶ್ರದ್ಧಾಭಕ್ತಿಯಿಂದ ಜರಗಿತು.
ಸಿಪಿಐ ಹಿರಿಯ ನಾಯಕ ಎಸ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು,(Byt1) “ರಾಮಪ್ಪ ಮಾಸ್ಟರ್ ಅವರು ನಮ್ಮ ಸಂಘಟನಾ ಚಟುವಟಿಕೆಗಳಿಗೆ ನಿರಂತರವಾಗಿ ಸಲಹೆ ಮತ್ತು ಪ್ರೋತ್ಸಾಹ ನೀಡುತ್ತಿದ್ದರು. ಅವರ ಮಾರ್ಗದರ್ಶನದಂತೆಯೇ ನಾವು ಸಾಗುತ್ತಿದ್ದೆವು” ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಅಧ್ಯಕ್ಷತೆ ವಹಿಸಿದ್ದ ಎಸ್. ರಾಮಚಂದ್ರರವರು ಮಾತನಾಡಿ ( Byt 2) “ರಾಮಪ್ಪ ಮಾಸ್ಟರ್ ಅವರ ಜೀವಿತಾವಧಿಯಲ್ಲಿ ಅವರ ಒಡನಾಡಿಯಾಗುವ ಸೌಭಾಗ್ಯ ನನಗೆ ದೊರೆತಿತ್ತು. ಮಂಜೇಶ್ವರದ ಜನತೆಯ ಮನಸ್ಸಿನಲ್ಲಿ ಅವರು ಎಂದಿಗೂ ಅಚ್ಚಳಿಯದ ಜನನಾಯಕನಾಗಿ ಉಳಿಯಲಿದ್ದಾರೆ” ಎಂದು ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಜಯರಾಂ ಬಳ್ಳಂಗುಡೇಲ್, ರಾಮಕೃಷ್ಣ ಕಡಂಬಾರ್, ಜಿಲ್ಲಾ ಮೋಟಾರ್ ಯೂನಿಯನ್ ಅಧ್ಯಕ್ಷ ಮುಸ್ತಫ ಕಡಂಬಾರ್, ಲೋಕಲ್ ಕಾರ್ಯದರ್ಶಿ ಶ್ರೀಧರ್ ಆರ್.ಕೆ., ಹರೀಶ್ ಕೆ.ಆರ್. ಹಾಗೂ ಗಂಗಾಧರ ಕೊಡ್ಡೆ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಅಜಿತ್ ಲಾಲ್ ಬಾಗ್ ಸ್ವಾಗತ ಕೋರಿದರು ಮತ್ತು ಶ್ರೀಧರ್ ಆರ್.ಕೆ. ವಂದನಾರ್ಪಣೆ ಮಾಡಿದರು.