ಮಂಗಳೂರು: ಮೇ 5, ವಿಶ್ವ ಅಸ್ತಮಾ ದಿನದ ಅಂಗವಾಗಿ ನಗರದ ಇಂಡಿಯಾನಾ ಹಾಸ್ಪಿಟಲ್ ಅಂಡ್ ಹಾರ್ಟ್ ಇನ್ಸ್ಟಿಟ್ಯೂಟ್ ವತಿಯಿಂದ ಮೇ 4ರಿಂದ 9ರವರೆಗೆ ‘ಉಚಿತ ಅಸ್ತಮಾ ತಪಾಸಣಾ ಸಪ್ತಾಹ’ ಆಯೋಜಿಸಲಾಗಿದೆ ಎಂದು ಆಸ್ಪತ್ರೆಯ ಕನ್ಸಲ್ಟೆಂಟ್ ಪಲ್ಮನಾಲಜಿಸ್ಟ್ ಡಾ. ಕೀರ್ತನ್ ಗಣಪತಿ ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ತಮಾ ಉಂಟಾಗುವ ಕಾರಣಗಳ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಇನ್ಹೇಲರ್ ಸರಿಯಾದ ಬಳಕೆಯ ಕುರಿತು ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವುದು ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಸಪ್ತಾಹದ ಅವಧಿಯಲ್ಲಿ ಪಲ್ಮನಾಲಜಿಸ್ಟ್ಗಳೊಂದಿಗೆ ಸಮಾಲೋಚನೆ ಸಂಪೂರ್ಣ ಉಚಿತವಾಗಿದ್ದು, ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಅಳೆಯುವ ಸ್ಪೈರೋಮೆಟ್ರಿ ಪರೀಕ್ಷೆಗೆ ಅಗತ್ಯವಿರುವವರಿಗೆ ಶೇ. 50 ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು. ಇದರಿಂದ ಅಸ್ತಮಾ ರೋಗಿಗಳು ತಮ್ಮ ಕಾಯಿಲೆಯ ಟ್ರಿಗರ್ಗಳನ್ನು ಗುರುತಿಸಿ ಸೂಕ್ತ ಚಿಕಿತ್ಸಾ ಯೋಜನೆ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಆಸ್ಪತ್ರೆಯ ಪಲ್ಮನಾಲಜಿ ವಿಭಾಗದಲ್ಲಿ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದ್ದು, ಸಾಮಾನ್ಯ ಸ್ಪೈರೋಮೆಟ್ರಿಯಿಂದ ಪತ್ತೆಯಾಗದ ಪ್ರಕರಣಗಳನ್ನು ಗುರುತಿಸಲು ಎಫ್ಒಟಿ, ಫಿನೋ ಹಾಗೂ ಸ್ಕಿನ್ ಪ್ರಿಕ್ ಟೆಸ್ಟ್ಗಳಂತಹ ಪರೀಕ್ಷೆಗಳು ಕೂಡ ಲಭ್ಯವಿವೆ ಎಂದು ವಿವರಿಸಿದರು.
ಉಸಿರಾಟದ ತೊಂದರೆ, ನಿರಂತರ ಕೆಮ್ಮು, ಅಲರ್ಜಿ ಸಮಸ್ಯೆ ಇರುವವರು ಹಾಗೂ ಧೂಮಪಾನಿಗಳು ಈ ಶಿಬಿರದ ಪ್ರಯೋಜನ ಪಡೆಯುವಂತೆ ಅವರು ಕರೆ ನೀಡಿದರು. ಶಿಬಿರದಲ್ಲಿ ಭಾಗವಹಿಸಲು ಮುಂಗಡವಾಗಿ ಅಪಾಯಿಂಟ್ಮೆಂಟ್ ಪಡೆಯುವುದು ಕಡ್ಡಾಯವಾಗಿದ್ದು, 6361687385 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳುವಂತೆ ವಿನಂತಿಸಿದರು. ಸುದ್ದಿಗೋಷ್ಠಿಯಲ್ಲಿ ಲಿಡ್ವಿನ್ ಡಿಸೋಜ ಉಪಸ್ಥಿತರಿದ್ದರು.