ಕಾಸರಗೋಡು: ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಜನತೆ ತಮ್ಮ ಹಕ್ಕಿನ ಪ್ರತಿನಿಧಿತ್ವವನ್ನು ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಆರೋಪಿಸಿದರು.
ಬಿಜೆಪಿ ಜಿಲ್ಲಾ ಸಮಿತಿ ವತಿಯಿಂದ ಹೊಸ ಬಸ್ ನಿಲ್ದಾಣದ ಬಳಿ ಮಹಿಳಾ ಮೀಸಲಾತಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ಆಯೋಜಿಸಿದ್ದ ಪ್ರತಿಭಟನಾ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಸೂದೆ ಅಂಗೀಕಾರವಾಗಿದ್ದರೆ ಕೇರಳಕ್ಕೆ ಲೋಕಸಭೆಯಲ್ಲಿ 30 ಸ್ಥಾನಗಳು ದೊರೆಯಬಹುದಾಗಿತ್ತು. ಆದರೆ ಮಸೂದೆಯನ್ನು ತಡೆಯುವ ಮೂಲಕ ಪ್ರಸ್ತುತ 20 ಸ್ಥಾನಗಳು ನಾಲ್ಕು ಅಥವಾ ಐದಕ್ಕೆ ಇಳಿಯುವ ಸಾಧ್ಯತೆ ಎದುರಾಗಿದೆ ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಪರಿಚಯಿಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿತ್ತು ಎಂದು ಟೀಕಿಸಿದ ಅವರು, 2026ರ ಜನಗಣತಿ ಪೂರ್ಣಗೊಂಡ ಬಳಿಕ ಕ್ಷೇತ್ರ ಪುನರ್ವಿಂಗಡಣೆಯನ್ನು ತಕ್ಷಣ ಕೈಗೊಳ್ಳಬೇಕು. ಅದರ ನಂತರ ಮೀಸಲಾತಿ ಜಾರಿಗೆ ತಂದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ 33 ಶೇಕಡಾ ಮೀಸಲಾತಿ ಜಾರಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ವಿಳಂಬವಿಲ್ಲದೆ ಮಸೂದೆಯನ್ನು ಪರಿಚಯಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಶಾ ಬಾನೋ ಪ್ರಕರಣ ಹಾಗೂ ತ್ರಿವಳಿ ತಲಾಖ್ ವಿಷಯಗಳಲ್ಲಿ ಕಾಂಗ್ರೆಸ್ನ ಮಹಿಳಾ ವಿರೋಧಿ ನಿಲುವುಗಳು ಸ್ಪಷ್ಟವಾಗಿದ್ದವು ಎಂದು ಅವರು ಆರೋಪಿಸಿದರು. 370ನೇ ವಿಧಿ ರದ್ದತಿ ಹಾಗೂ ತೆರಿಗೆ ಸುಧಾರಣೆಗಳಂತಹ ಐತಿಹಾಸಿಕ ಕ್ರಮಗಳ ಸಾಲಿನಲ್ಲಿ ಸೇರಬೇಕಿದ್ದ ಈ ಮಸೂದೆಯನ್ನು ವಿರೋಧ ಪಕ್ಷಗಳು ತಡೆಯುವ ಮೂಲಕ ದೇಶಕ್ಕೆ ನಷ್ಟ ಉಂಟುಮಾಡಿವೆ ಎಂದು ಹೇಳಿದರು.
ಸಭೆಗೆ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಷ್ಟ್ರೀಯ ಮಂಡಳಿ ಸದಸ್ಯೆ ಪ್ರಮೀಳಾ ಸಿ. ನಾಯಕ್, ರಾಜ್ಯ ಸಮಿತಿ ಸದಸ್ಯರಾದ ಸವಿತಾ ಟೀಚರ್, ಸತೀಶ್ ಚಂದ್ರ ಭಂಡಾರಿ, ಜಿಲ್ಲಾ ಉಪಾಧ್ಯಕ್ಷೆ ಎಚ್.ಆರ್. ಸುಕನ್ಯಾ, ಕಾರ್ಯದರ್ಶಿಗಳಾದ ಪುಷ್ಪಾ ಗೋಪಾಲನ್, ಪ್ರಮೀಳಾ ಮಜಲ್, ಅಶ್ವಿನಿ ಕೆ.ಎಂ., ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶಾನ್ಬಾಗ್, ಬೆಳ್ಳೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕೆ.ಎಸ್. ರಮಣಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ಆರ್. ನಾಯಕ್, ಪ್ರೇಮಲತಾ ಎಸ್ ಮತ್ತು ಜಯಂತಿ ಶೆಟ್ಟಿ ಮಾತನಾಡಿದರು.
ಇದಕ್ಕೂ ಮುನ್ನ ಕಾಸರಗೋಡು ತಾಳಿಪಡ್ಡು ಮೈದಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು.