ಮಂಜೇಶ್ವರ: ಗಡಿ ಭಾಗದ ಮಂಜೇಶ್ವರದ ಪೊಸೋಟು ಹೊಳೆ ಇದೀಗ ಕಸದ ತೊಟ್ಟಿಯಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಆತಂಕ ಮೂಡಿಸಿದೆ. ಜನಸಂದಣಿ ಇಲ್ಲದ ಸಮಯ ನೋಡಿ ಸೇಪ್ಟಿ ಟ್ಯಾಂಕ್ಗಳಿಂದ ಸಂಗ್ರಹಿಸಿದ ಶೌಚಾಲಯ ಮಾಲಿನ್ಯ (ಮಲತ್ಯಾಜ್ಯ) ವನ್ನು ಟ್ಯಾಂಕರ್ಗಳ ಮೂಲಕ ತಂದು ನೇರವಾಗಿ ಹೊಳೆಗೆ ಸುರಿಯಲಾಗುತ್ತಿದೆ ಎಂಬ ಗಂಭೀರ ದೂರುಗಳು ಕೇಳಿಬಂದಿವೆ.
ಕೇವಲ ಮಲತ್ಯಾಜ್ಯ ಮಾತ್ರವಲ್ಲದೆ, ಕೋಳಿ ಮತ್ತು ದನದ ಮಾಂಸದ ತ್ಯಾಜ್ಯಗಳನ್ನು ಕೂಡ ಇಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಇಡೀ ಪರಿಸರ ದುರ್ನಾತದಿಂದ ಕೂಡಿದ್ದು, ಈ ಭಾಗದ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳು ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುತ್ತಿದ್ದಾರೆ.ಹೊಳೆಯ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಈ ಮಲಿನ ನೀರು ಇದೀಗ ಸುತ್ತಮುತ್ತಲಿನ ಮನೆಗಳ ಬಾವಿ ನೀರಿಗೂ ಸೇರುತ್ತಿದೆ. ಇದರಿಂದ ಕುಡಿಯುವ ನೀರಿಗೂ ತೊಂದರೆ ಉಂಟಾಗಿದೆ. ನೀರಿನ ವಿಷಕಾರಿ ಅಂಶದಿಂದಾಗಿ ಹೊಳೆಯಲ್ಲಿರುವ ಮೀನುಗಳು ಮತ್ತು ಇತರ ಜಲಚರಗಳು ಸತ್ತು ತೇಲುತ್ತಿರುವುದು ಪರಿಸರದ ಭೀಕರತೆಗೆ ಸಾಕ್ಷಿಯಾಗಿದೆ.
ಸ್ಥಳೀಯ ನಿವಾಸಿಗಳ ಆರೋಪದಂತೆ, ಕೇವಲ ಸ್ಥಳೀಯವಲ್ಲದೆ ನೆರೆಯ ಕರ್ನಾಟಕ ಭಾಗದಿಂದಲೂ ಟ್ಯಾಂಕರ್ಗಳಲ್ಲಿ ಮಲತ್ಯಾಜ್ಯವನ್ನು ತಂದು ಇಲ್ಲಿನ ಹೊಳೆಗೆ ಸುರಿಯಲಾಗುತ್ತಿದೆ. ರಾತ್ರೋರಾತ್ರಿ ನಡೆಯುವ ಈ ಕೃತ್ಯದ ವಿರುದ್ಧ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆಕ್ರೋಶ ಸಾರ್ವಜನಿಕರಲ್ಲಿ ಮನೆಮಾಡಿದೆ.”ನಮ್ಮ ಬದುಕು ನರಕವಾಗುತ್ತಿದೆ. ಅಧಿಕಾರಿಗಳು ಮೌನ ವಹಿಸಿದರೆ ನಮಗೆ ಯಾರಿದ್ದಾರೆ ?” ಎಂದು ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಈಗಾಗಲೇ ಮಂಜೇಶ್ವರ ಗ್ರಾಮ ಪಂಚಾಯತ್ಗೆ ದೂರು ಸಲ್ಲಿಕೆಯಾಗಿದೆ. ಘಟನೆಯ ತೀವ್ರತೆಯನ್ನು ಪರಿಗಣಿಸಿರುವ ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ ಬಶೀರ್ ಕನಿಲ ವಿಷಯವನ್ನು ಕೂಡಲೇ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದೆಂದು ಹೇಳುವುದರ ಜೊತೆಗೆ
ಮಾಲಿನ್ಯಕಾರರನ್ನು ಪತ್ತೆಹಚ್ಚಲು ಮತ್ತು ಕಾನೂನು ಬಾಹಿರ ಚಟುವಟಿಕೆ ತಡೆಯಲು ಹೊಳೆಯ ಆಯಕಟ್ಟಿನ ಜಾಗಗಳಲ್ಲಿ ತಕ್ಷಣವೇ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಪರಿಸರ ಮಾಲಿನ್ಯ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.ಪರಿಸರವಾದಿಗಳು ಮತ್ತು ನಾಗರಿಕರು ಈ ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಪೊಸೋಟು ಹೊಳೆಯನ್ನು ಉಳಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ