ಕಾಸರಗೋಡು ಜಿಲ್ಲೆಯ ಉಪ್ಪಳ ಪಟ್ಟಣದಲ್ಲಿ 2024ರ ಮಾರ್ಚ್ 27ರಂದು ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ನಡೆದ ಐವತ್ತು ಲಕ್ಷ ರೂಪಾಯಿ ದರೋಡೆ ಪ್ರಕರಣದ ಮುಖ್ಯ ಸೂತ್ರಧಾರನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ದಿಂಡಿಗಲ್ ರಾಮ್ಜಿ ನಗರ ನಿವಾಸಿಯಾದ ಅರುಮುಖನ್ ಅಲಿಯಾಸ್ ಕಿಟ್ಟು (55) ಬಂಧಿತ ಆರೋಪಿ. ಘಟನೆ ಬಳಿಕ ಛತ್ತೀಸ್‌ಗಢದಲ್ಲಿ ಅಡಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಜೇಶ್ವರ ಎಸ್‌ಐ ದಿನೇಶ್ ರಾಜನ್ ನೇತೃತ್ವದ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಉಪ್ಪಳ ಪಟ್ಟಣದ ಆಕ್ಸಿಸ್ ಬ್ಯಾಂಕ್ ಎಟಿಎಂ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ‘ಸೆಕ್ಯೂರ್ ವ್ಯಾಲ್ಯೂ’ ಸಂಸ್ಥೆಯ ವ್ಯಾನ್‌ನ ಗಾಜು ಒಡೆದು, ಅದರೊಳಗಿದ್ದ ಅರ್ಧ ಕೋಟಿ ರೂಪಾಯಿ ನಗದು ಹೊಂದಿದ್ದ ಚೀಲವನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದರು. ಪ್ರಕರಣದ ತನಿಖೆ ವೇಳೆ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳ ಸುಳಿವು ಪತ್ತೆಹಚ್ಚಿ, ಈಗಾಗಲೇ ಇತರ ಆರೋಪಿಗಳಾದ ಮುತ್ತು ಕುಮಾರ್ ಹಾಗೂ ಕಾರ್ವರಣ್ ಅವರನ್ನು ಬಂಧಿಸಿದ್ದರು. ಬಳಿಕ ಪರಾರಿಯಾಗಿದ್ದ ಕಿಟ್ಟುಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಇದೀಗ ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.