ನಗರದ ಲೈಟ್ ಹೌಸ್‌ಹಿಲ್ ರಸ್ತೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ (DKESMA) ಕಟ್ಟಡವು ಪ್ರಕೃತಿ ವಿಕೋಪದಿಂದಾಗಿ ಕುಸಿಯುವ ಭೀತಿಯಲ್ಲಿದ್ದು, ಕಟ್ಟಡದ ರಕ್ಷಣೆಗಾಗಿ ತಡೆಗೋಡೆ ನಿರ್ಮಿಸಲು ಸಂಘವು ಸಾರ್ವಜನಿಕರ ಮತ್ತು ದಾನಿಗಳ ನೆರವು ಅಗತ್ಯ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷರಾದ ಕರ್ನಲ್ ಜಯಚಂದ್ರ ಎ ಕೆ ತಿಳಿಸಿದರು .
ಅವರು ನಗರದ ಪತ್ರಿಕಾಭವದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಳೆದ ಮೇ 28, 2025ರಂದು ಸಂಭವಿಸಿದ ಭಾರಿ ಮಳೆಗೆ ಲೈಟ್‌ಹೌಸ್‌ಹಿಲ್ ರಸ್ತೆಯ ಅಂಚಿನಲ್ಲಿರುವ ಈ ಕಟ್ಟಡದ ಹಿಂಭಾಗದ ಗುಡ್ಡವು ಕುಸಿದು ಬಿದ್ದಿದೆ. ಈ ಹಿಂದೆ ಸಂಘದ ಸದಸ್ಯರೇ 25 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ನಿರ್ಮಿಸಿದ್ದ ತಡೆಗೋಡೆಯು ಸಂಪೂರ್ಣವಾಗಿ ನೆಲಸಮವಾಗಿದ್ದು, ಅದರ ಅವಶೇಷಗಳು ಪಕ್ಕದ ಸೇಂಟ್ ಅಲೋಯ್ಸಿಯಸ್ ವಿಶ್ವವಿದ್ಯಾಲಯದ ಕ್ರೀಡಾಂಗಣಕ್ಕೆ ಬಿದ್ದಿವೆ. ಈ ಕುಸಿತದಿಂದಾಗಿ ಕಟ್ಟಡದ ಅಡಿಪಾಯವು ಸಂಪೂರ್ಣವಾಗಿ ತೆರೆದುಕೊಂಡಿದ್ದು, ಕಟ್ಟಡದ ಸ್ಥಿರತೆಗೆ ತೀವ್ರ ಅಪಾಯ ಎದುರಾಗಿದೆ ಎಂದರು .
ಸ್ಥಳೀಯ ಶಾಸಕರಾದ ವೇದವ್ಯಾಸ ಕಾಮತ್ ಅವರು ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕ ನಿಧಿಯಿಂದ ತಡೆಗೋಡೆ ನಿರ್ಮಿಸುವ ಭರವಸೆ ನೀಡಿದ್ದರೂ, ತಾಂತ್ರಿಕ ಕಾರಣಗಳು ಮತ್ತು ನಿಧಿಯ ಕೊರತೆಯ ನೆಪವೊಡ್ಡಿ ಮಂಗಳೂರು ಮಹಾನಗರ ಪಾಲಿಕೆ (MCC) ಕಾಮಗಾರಿಯನ್ನು ವಿಳಂಬ ಮಾಡುತ್ತಿದೆ. ಇಂಜಿನಿಯರ್‌ಗಳ ಅಂದಾಜಿನ ಪ್ರಕಾರ, ಈ ಕಾಮಗಾರಿಗೆ ಸುಮಾರು 46 ರಿಂದ 86 ಲಕ್ಷ ರೂ. ಗಳ ಅಗತ್ಯವಿದೆ. ಆದರೆ, ಸೀಮಿತ ಸಂಪನ್ಮೂಲ ಹೊಂದಿರುವ ಸಂಘಕ್ಕೆ ಈ ಬೃಹತ್ ಮೊತ್ತವನ್ನು ಭರಿಸುವುದು ಅಸಾಧ್ಯವಾಗಿದೆ ಎಂದರು .
ಸುರಕ್ಷತೆಯ ದೃಷ್ಟಿಯಿಂದ ಕಟ್ಟಡವನ್ನು ಬಳಸದಂತೆ ಪಾಲಿಕೆ ಅಧಿಕಾರಿಗಳು ಈಗಾಗಲೇ ನೋಟಿಸ್ ನೀಡಿದ್ದು .ಮುಂದಿನ ಮಳೆಗಾಲದ ಒಳಗೆ ತಡೆಗೋಡೆ ನಿರ್ಮಾಣವಾಗದಿದ್ದರೆ, ಇಡೀ ಕಟ್ಟಡವೇ ಕುಸಿದು ಬಿದ್ದು ಬೃಹತ್ ಆಸ್ತಿ-ಪಾಸ್ತಿ ಹಾನಿಯಾಗುವ ಸಾಧ್ಯತೆಯಿದೆ. ಕಟ್ಟಡವಿರುವ 5 ಸೆಂಟ್ಸ್ ಜಮೀನು ಮಂಜೂರಾಗಿದ್ದರೂ, ತಡೆಗೋಡೆ ನಿರ್ಮಿಸಬೇಕಾದ 1 ಸೆಂಟ್ಸ್ ಜಾಗ ಇಂದಿಗೂ ಸರ್ಕಾರದ ಅಧೀನದಲ್ಲಿದೆ, ಇದು ತಾಂತ್ರಿಕ ತೊಡಕಿಗೆ ಕಾರಣವಾಗಿದೆ ಎಂದು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸೈನಿಕರ ಸಂಘದ ಕಾರ್ಯದರ್ಶಿಗಳಾದ ಕ್ಯಾಪ್ಟನ್ ವಿ ದೀಪಕ್ ಅಡ್ಯಂತಾಯ , ಜತೆ ಕಾರ್ಯದರ್ಶಿಗಳಾದ ವೆಟರನ್ ಬಾಲಚಂದ್ರ ಕೆ ಎಸ್ , ಕೋಶಾಧಿಕಾರಿಗಳಾದ ವೆಟರನ್ ಸುಧೀರ್ ಪೈ ಎಂ ಉಪಸ್ಥಿತರಿದ್ದರು .