ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ದಿಢೀರ್ ತಪಾಸಣೆ ನಡೆಸಿದ್ದು, ಹಲವು ಹೋಟೆಲ್‌ಗಳಲ್ಲಿ ಅಶುಚಿಯಾದ ಮತ್ತು ಹಳಸಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ.
ಮಂಜೇಶ್ವರ ಆರೋಗ್ಯ ಇಲಾಖೆಯ ಅಧಿಕಾರಿ ಹಾಶಿಂ ಅವರ ನೇತೃತ್ವದ ತಂಡವು ತಲಪಾಡಿ, ತೂಮಿನಾಡು ಹಾಗೂ ಉದ್ಯಾವರ ಸೇರಿದಂತೆ ಪಂಚಾಯತ್ ವ್ಯಾಪ್ತಿಯ ಪ್ರಮುಖ ಹೋಟೆಲ್‌ಗಳ ಮೇಲೆ ಈ ಕಾರ್ಯಾಚರಣೆ ನಡೆಸಿತು. ತಪಾಸಣೆಯ ವೇಳೆ ಕಿಚನ್‌ನ ಶುಚಿತ್ವ ಹಾಗೂ ಸಂಗ್ರಹಿಸಿಟ್ಟಿದ್ದ ಆಹಾರ ಪದಾರ್ಥಗಳನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಕೆಲವು ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ನೀಡಲು ಇರಿಸಲಾಗಿದ್ದ ಹಳಸಿದ ಆಹಾರ ಪತ್ತೆಯಾಗಿದ್ದು, ಅಧಿಕಾರಿಗಳು ತಕ್ಷಣವೇ ಅವುಗಳನ್ನು ವಶಪಡಿಸಿಕೊಂಡು ನಾಶಪಡಿಸಿದರು.
ಪಂಚಾಯತ್ ಅಧ್ಯಕ್ಷರ ವಿಶೇಷ ಸೂಚನೆಯ ಮೇರೆಗೆ, ಈ ಬಾರಿಯ ದಾಳಿಯಲ್ಲಿ ವ್ಯಾಪಾರಸ್ಥರಿಗೆ ಯಾವುದೇ ದಂಡ ವಿಧಿಸದೆ “ಅಂತಿಮ ಮುನ್ಸೂಚನೆ” ಎಂಬಂತೆ ಎಚ್ಚರಿಕೆ ನೀಡಿ ಬಿಡಲಾಗಿದೆ.
ಮುಂದಿನ ದಿನಗಳಲ್ಲಿ ಇಲಾಖೆಯು ನಿರಂತರ ತಪಾಸಣೆ ನಡೆಸಲಿದೆ. ಒಂದು ವೇಳೆ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ ಅಥವಾ ಅಶುಚಿತ್ವ ಮುಂದುವರಿದರೆ, ಭಾರೀ ದಂಡ ವಿಧಿಸುವುದಲ್ಲದೆ ಹೋಟೆಲ್‌ನ ಪರವಾನಗಿ ಅಮಾನತುಗೊಳಿಸುವುದಾಗಿ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಾರ್ಡ್ ಸದಸ್ಯರಾದ ಇಲ್ಯಾಸ್ ತೂಮಿನಾಡು ಅವರು ಅಧಿಕಾರಿಗಳ ಜೊತೆಗಿದ್ದರು.
ಗಮನಿಸಿ: ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹೋಟೆಲ್ ಮಾಲೀಕರು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ತಾಜಾ ಆಹಾರವನ್ನೇ ಪೂರೈಸಬೇಕು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.