ಬಂದಿಯೊಡ್–ಇಚ್ಚಿಲಂಗೋಡ್ ರಸ್ತೆ ದುಸ್ಥಿತಿ: ಸ್ಥಳೀಯರು ಸಂಕಷ್ಟದಲ್ಲಿ

ಮಂಜೇಶ್ವರ: ಬಂದಿಯೊಡ್–ಇಚ್ಚಿಲಂಗೋಡ್ ಸಂಪರ್ಕ ರಸ್ತೆ ಕಳೆದ ಮೂರು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದ್ದು, ನಿವಾಸಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ರಸ್ತೆ ಹಾಳಾಗಿರುವುದರಿಂದ ಆಟೋ ರಿಕ್ಷಾಗಳು ಈ ಭಾಗಕ್ಕೆ ಬರುವುದಕ್ಕೂ ಹಿಂದೇಟು ಹಾಕುತ್ತಿವೆ. ಆಟೋ ಬಾಡಿಗೆಗೆ ಕರೆ ಮಾಡಿದರೂ ಚಾಲಕರು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಚಾಲಕರ ತಪ್ಪಲ್ಲ, ರಸ್ತೆ ದುಸ್ಥಿತಿಯೇ ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರದೇಶದಲ್ಲಿ ದೇವಸ್ಥಾನ ಹಾಗೂ ಮಸೀದಿ ಇರುವುದರಿಂದ ಜನರ ಸಂಚಾರ ಹೆಚ್ಚಾಗಿದೆ. ವಿಶೇಷವಾಗಿ ಇಚ್ಚಿಲಂಗೋಡ್ ಜುಮಾ ಮಸೀದಿಗೆ ಪ್ರತಿದಿನ ನೂರಾರು ಭಕ್ತರು ಹಾಗೂ ಯಾತ್ರಾರ್ಥಿಗಳು ಆಗಮಿಸುತ್ತಾರೆ. ಆದರೆ ಈ ರಸ್ತೆಯಲ್ಲಿ ಸಂಚರಿಸುವುದು ಜೀವವನ್ನು ಪಣಕ್ಕಿಟ್ಟು ಪ್ರಯಾಣಿಸುವಂತಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.


ಸ್ವಲ್ಪ ಅಜಾಗರೂಕತೆ ನಡೆದರೂ ವಾಹನಗಳು ಪಕ್ಕದ ಹೊಳೆಗೆ ಉರುಳುವ ಅಪಾಯವಿದೆ. ಬಿಯಾರಂ ರಸ್ತೆಯಲ್ಲಿಯೂ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಭೀತಿ ಎದುರಾಗಿದೆ. ಮಳೆಗಾಲ ಆರಂಭವಾದರೆ ಈ ಭಾಗದ ಜನರಿಗೆ ಹೊರಗೆ ಹೋಗುವುದೇ ಕಷ್ಟವಾಗಲಿದೆ. ರಸ್ತೆ ಸಂಪೂರ್ಣ ಹಾಳಾಗುವ ಸಾಧ್ಯತೆಯಿದ್ದು, ತಕ್ಷಣ ಕಾಮಗಾರಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಪ್ರದೇಶದಲ್ಲಿ ಹೆಚ್ಚಿನವರು ಕೃಷಿಕರಾಗಿದ್ದು, ಸೊಪ್ಪು ಬೆಳೆಗಾರಿಕೆ, ತೆಂಗು, ಅಡಿಕೆ ಹಾಗೂ ನೆಲ ಬೆಳೆಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಕೃಷಿ ಉತ್ಪನ್ನ ಸಾಗಣೆಯಿಗೂ ರಸ್ತೆ ಸಮಸ್ಯೆ ತೊಂದರೆಯಾಗುತ್ತಿದೆ. ಸ್ಥಳೀಯ ಸಂಸದರು ಹಾಗೂ ಶಾಸಕರು ತಕ್ಷಣ ಗಮನಹರಿಸಿ, ಸಮರ್ಪಕ ಅನುದಾನ ಬಿಡುಗಡೆ ಮಾಡಿ ರಸ್ತೆ ಮೆಕಾಡಂ ಹಾಗೂ ಟಾರಿಂಗ್ ಕಾಮಗಾರಿ ಕೈಗೊಳ್ಳಬೇಕು. ಜೊತೆಗೆ ಬೀದಿ ದೀಪಗಳ ವ್ಯವಸ್ಥೆಯೂ ಮಾಡಿಕೊಡಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!