ಗುರುಪುರ ನೀರಿನ ಸಮಸ್ಯೆ ತುರ್ತು ಪರಿಹಾರಕ್ಕೆ ಶಾಸಕ ಭರತ್ ಶೆಟ್ಟಿ ಸೂಚನೆ

ಮಂಗಳೂರು: ಗುರುಪುರ–ಕೈಕಂಬ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಉಂಟಾದ ಕುಡಿಯುವ ನೀರಿನ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸುವಂತೆ ಶಾಸಕ ಭರತ್ ಶೆಟ್ಟಿ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಗೆ ಪ್ರತ್ಯೇಕ ಸಭೆ ಕರೆಯುವಂತೆ ಅವರು ನಿರ್ದೇಶಿಸಿದರು.


ಮಂಗಳವಾರ ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರುಪುರ ಭಾಗದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ನೀರಿನ ಪೈಪ್ ಅಳವಡಿಕೆಗೆ ಅಗತ್ಯ ಯುಟಿಲಿಟಿ ವ್ಯವಸ್ಥೆ ಮಾಡದ ಕಾರಣ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ ಎಂದು ತಿಳಿಸಿದರು. ಪಂಚಾಯತ್ ಮಟ್ಟದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲವೆಂದು ಅಧಿಕಾರಿಗಳು ಮಾಹಿತಿ ನೀಡಿದರು.


ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಭರತ್ ಶೆಟ್ಟಿ, ಸಾರ್ವಜನಿಕರಿಗೆ ನಿರಂತರ ಕುಡಿಯುವ ನೀರು ಪೂರೈಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ. ಸಮಸ್ಯೆ ಯಾವುದೇ ಆಗಿರಲಿ, ತಕ್ಷಣ ಪರಿಹಾರ ಕಂಡುಹಿಡಿಯಬೇಕು. ಈ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದ್ದು, ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಗುರುಪುರ, ಮುತ್ತೂರು, ಮುಚೂರು, ಉಳಾಯಿಬೆಟ್ಟು, ಬಡಗ ಎಡಪದವು ಹಾಗೂ ಎಡಪದವು ಗ್ರಾಮ ಪಂಚಾಯತ್‌ಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಸರಬರಾಜು ಮಾಡಲಾಗುತ್ತಿದ್ದು, ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಕೊರತೆ ಉಂಟಾಗಿ ಸರಬರಾಜಿನಲ್ಲಿ ವ್ಯತ್ಯಯ ಕಂಡುಬರುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.


ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೆ ಅಭಿನಂದನೆ
ಪ್ರಸಕ್ತ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಪಡೆದಿರುವ ಇಲಾಖೆ ಸಿಬ್ಬಂದಿಯನ್ನು ಶಾಸಕ ಭರತ್ ಶೆಟ್ಟಿ ಅಭಿನಂದಿಸಿದರು. ಈ ಸಾಧನೆಯಿಂದ ತೃಪ್ತಿಗೊಳ್ಳದೆ ಕಲಿಕಾ ಪದ್ಧತಿಯನ್ನು ಇನ್ನಷ್ಟು ಸುಧಾರಿಸಿ, ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಮುಂದಿನ ಪರೀಕ್ಷೆಗಳಿಗೆ ಸಜ್ಜುಗೊಳಿಸಬೇಕು ಎಂದು ಸಲಹೆ ನೀಡಿದರು.
ಅರಣ್ಯ ಪ್ರದೇಶದಲ್ಲಿ ಚಿರತೆಗಳ ಸಂಚರಣೆ ಹೆಚ್ಚಳ
ಮಂಗಳೂರು ತಾಲೂಕಿನಲ್ಲಿ ಮೀಸಲು ಅರಣ್ಯ ಪ್ರದೇಶಗಳ ಕೊರತೆಯಿಂದಾಗಿ ಚಿರತೆಗಳ ಸಂಚರಣೆ ಹೆಚ್ಚಳವಾಗಿದೆ. ತೋಡಾರು ಹಾಗೂ ಮೂಡಬಿದ್ರೆ ಭಾಗಗಳಿಂದ ಚಿರತೆಗಳು ಗ್ರಾಮಾಂತರ ಪ್ರದೇಶಗಳಿಗೆ ಬರುತ್ತಿದ್ದು, ಕುಲಶೇಖರ ಮತ್ತು ಬಡಗ ಎಕ್ಕಾರು ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಎರಡು ಚಿರತೆಗಳನ್ನು ಅರಣ್ಯಕ್ಕೆ ಹಿಂದಟ್ಟಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಈ ವನ್ಯಜೀವಿಗಳ ಚಲನವಲನದ ಮೇಲೆ ನಿರಂತರ ನಿಗಾವಹಿಸಲಾಗುತ್ತಿದೆ ಎಂದರು.
ಕಳಪೆ ಅಡುಗೆ ಎಣ್ಣೆ ಬಳಕೆ – ತಪಾಸಣೆಗೆ ಸೂಚನೆ
ಹೊಟೇಲ್ ಹಾಗೂ ಬೀದಿಬದಿ ವ್ಯಾಪಾರಗಳಲ್ಲಿ ಕಳಪೆ ಅಡುಗೆ ಎಣ್ಣೆ ಬಳಕೆಯಾಗುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ತಕ್ಷಣ ತಪಾಸಣೆ ನಡೆಸಬೇಕು. ಮುಂದಿನ ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ತಾಪಂ ಇಒಗೆ ಶಾಸಕ ಸೂಚನೆ ನೀಡಿದರು.


ನಾಯಿ ಕಡಿತ ಪ್ರಕರಣಗಳ ಹೆಚ್ಚಳ – ಗಂಭೀರ ಚಿಂತನೆ ಅಗತ್ಯ
ಮಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಜನವರಿಯಿಂದ ಏಪ್ರಿಲ್ ವರೆಗೆ ನಾಲ್ಕು ತಿಂಗಳಲ್ಲಿ 8,456 ನಾಯಿ ಕಡಿತ ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಲ್ಲಿ 1,000ಕ್ಕೂ ಅಧಿಕ ಪ್ರಕರಣಗಳು ಬೀದಿ ನಾಯಿಗಳ ದಾಳಿಗೆ ಸಂಬಂಧಿಸಿದ್ದಾಗಿವೆ ಎಂದು ಪಶುಸಂಗೋಪನಾ ಇಲಾಖೆ ಮಾಹಿತಿ ನೀಡಿದೆ.
ರೇಬಿಸ್ ವಿರುದ್ಧ ಜನರಲ್ಲಿ ಜಾಗೃತಿ ಮೂಡುತ್ತಿರುವುದು ಉತ್ತಮ ಬೆಳವಣಿಗೆಯಾದರೂ, ರೇಬಿಸ್ ಹರಡುವ ಸಾಧ್ಯತೆ ಇರುವ ನಾಯಿಗಳಿಂದ ಸಾರ್ವಜನಿಕರ ಸುರಕ್ಷತೆಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಭರತ್ ಶೆಟ್ಟಿ ಸೂಚಿಸಿದರು. ಸಾಕು ನಾಯಿಗಳಿಗೆ ಹೆಗ್ಗಣ ಕಚ್ಚಿದರೂ ರೇಬಿಸ್ ಹರಡುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ಕೂಡ ಜಾಗೃತಿ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಶಕುಂತಳಾ ಶೆಣೈ, ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಹೊಳ್ಳ, ತಹಶೀಲ್ದಾರ್ ರಮೇಶ್ ಬಾಬು, ತಾಲೂಕು ಯೋಜನಾಧಿಕಾರಿ ಸುಕನ್ಯಾ ರಾವ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!