ಕೇರಳದಲ್ಲಿ ಮುಖ್ಯಮಂತ್ರಿ ಗಾದಿಗಾಗಿ ಕಾಂಗ್ರೆಸ್ ಒಳಗಿನ ಪೈಪೋಟಿ ತೀವ್ರಗೊಂಡಿದ್ದು, ಪ್ರಮುಖವಾಗಿ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಹಾಗೂ ರಮೇಶ್ ಚೆನ್ನಿತ್ತಲ ನಡುವಿನ ಸ್ಪರ್ಧೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಮೂವರು ನಾಯಕರ ಬೆಂಬಲಿಗರು ಮುಖ್ಯಮಂತ್ರಿ ಹುದ್ದೆಗಾಗಿ ತೀವ್ರ ಲಾಬಿ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ತಮ್ಮ ಆಕಾಂಕ್ಷಿ ನಾಯಕರ ಪರವಾಗಿ ಅಭಿನಂದನಾ ಸಂದೇಶಗಳು ಹಾಗೂ ಪ್ರಚಾರ ಅಭಿಯಾನಗಳು ಜೋರಾಗಿವೆ.
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆ ಸಂದರ್ಭದಲ್ಲಿ ಧರ್ಮ ಹಾಗೂ ಜಾತಿ ಸಮೀಕರಣಗಳು ಮಹತ್ವದ ಪಾತ್ರವಹಿಸುವ ಹಿನ್ನೆಲೆಯಲ್ಲಿ, ನಾಯರ್ ಸಮುದಾಯಕ್ಕೆ ಸೇರಿದ ಈ ಮೂವರು ನಾಯಕರ ಮಧ್ಯೆ ನಡೆಯುತ್ತಿರುವ ಪೈಪೋಟಿ ಇನ್ನಷ್ಟು ಸಂಕೀರ್ಣ ಸ್ವರೂಪ ಪಡೆದುಕೊಂಡಿದೆ.
ಇದರವರೆಗೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸಿಲ್ಲ. ಈ ಸಂಬಂಧ ಪಕ್ಷದ ಹಿರಿಯ ಮುಖಂಡರಾದ ಮುಕುಲ್ ವಾಸ್ನಿಕ್ ಮತ್ತು ಅಜಯ್ ಮಾಕನ್ ಅವರನ್ನು ಕೇರಳದ ವೀಕ್ಷಕರಾಗಿ ನೇಮಿಸಲಾಗಿದೆ.
ವಿ.ಡಿ. ಸತೀಶನ್ ಪರವಾಗಿ ಎರ್ನಾಕುಳಂನಲ್ಲಿ ಹಾಗೂ ಕೆ.ಸಿ. ವೇಣುಗೋಪಾಲ್ ಪರವಾಗಿ ನವದೆಹಲಿಯಲ್ಲಿ ಬೆಂಬಲಿಗರು ಅಭಿನಂದನಾ ಸಮಾರಂಭಗಳನ್ನು ಆಯೋಜಿಸಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ.
ಇನ್ನೊಂದೆಡೆ, ನೆಹರು-ಗಾಂಧಿ ಕುಟುಂಬಕ್ಕೆ ಆಪ್ತನಾಗಿ ಗುರುತಿಸಿಕೊಂಡಿರುವ ರಮೇಶ್ ಚೆನ್ನಿತ್ತಲ ಅವರು ಚುನಾವಣಾ ಫಲಿತಾಂಶ ಪ್ರಕಟವಾದ ತಕ್ಷಣ, “ಯುಡಿಎಫ್‌ನ ಐತಿಹಾಸಿಕ ಗೆಲುವಿನ ಹಿಂದೆ ರಾಹುಲ್ ಗಾಂಧಿ ಅವರ ನಾಯಕತ್ವ ಮತ್ತು ಐದು ಗ್ಯಾರಂಟಿ ಯೋಜನೆಗಳೇ ಪ್ರಮುಖ ಕಾರಣ” ಎಂದು ಹೇಳಿಕೆ ನೀಡಿದ್ದರು.
2021ರ ಚುನಾವಣಾ ಸೋಲಿನ ಬಳಿಕ ವಿರೋಧ ಪಕ್ಷದ ನಾಯಕನಾಗಿ ಯುಡಿಎಫ್‌ಗೆ ಮುನ್ನಡೆ ನೀಡಿದ್ದ ವಿ.ಡಿ. ಸತೀಶನ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ಹಿನ್ನೆಲೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರೇ ಸೂಕ್ತ ಅಭ್ಯರ್ಥಿ ಎಂದು ಅವರ ಬೆಂಬಲಿಗರು ವಾದಿಸುತ್ತಿದ್ದಾರೆ. ಯುಡಿಎಫ್ ಮೈತ್ರಿಕೂಟದ ಪ್ರಮುಖ ಅಂಗವಾಗಿರುವ ಮುಸ್ಲಿಂ ಲೀಗ್‌ನ ಬೆಂಬಲವೂ ಸತೀಶನ್ ಅವರಿಗೆ ಇದೆ ಎನ್ನಲಾಗಿದೆ.
ಇನ್ನೊಂದೆಡೆ, “ಮುಖ್ಯಮಂತ್ರಿ ಆಯ್ಕೆಯಲ್ಲಿ ಜನಪ್ರಿಯತೆ ಮಾತ್ರವಲ್ಲ, ಶಾಸಕರ ಬೆಂಬಲವೂ ನಿರ್ಣಾಯಕ” ಎಂದು ವೇಣುಗೋಪಾಲ್ ಬೆಂಬಲಿಗರು ಪ್ರತಿಪಾದಿಸಿದ್ದಾರೆ. ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ವೇಣುಗೋಪಾಲ್ ಪ್ರಮುಖರಾಗಿರುವುದರಿಂದ, ಅಂತಿಮ ನಿರ್ಧಾರದಲ್ಲಿ ರಾಹುಲ್ ಅವರ ಅಭಿಪ್ರಾಯವೂ ಮಹತ್ವ ಪಡೆಯಲಿದೆ ಎಂದು ಹೇಳಲಾಗುತ್ತಿದೆ.
ಗಮನಾರ್ಹವಾಗಿ, ಕೇರಳ ವಿಧಾನಸಭೆಗೆ ಏಪ್ರಿಲ್ 9ರಂದು ಮತದಾನ ನಡೆದಿದ್ದು, ಮೇ 4ರಂದು ಪ್ರಕಟವಾದ ಫಲಿತಾಂಶದಲ್ಲಿ ಯುಡಿಎಫ್ 102 ಸ್ಥಾನಗಳನ್ನು ಗೆದ್ದು ದಶಕದ ಬಳಿಕ ಮತ್ತೆ ಅಧಿಕಾರದ ಗದ್ದುಗೆ ಏರಿದೆ.