ಮಂಜೇಶ್ವರ :ವಾಣಿಜ್ಯ ಬಳಕೆಯ ಇಂಧನ ದರವನ್ನು ಸತತವಾಗಿ ಏರಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಕರೆ ನೀಡಿದ್ದ 24 ಗಂಟೆಗಳ ರಾಜ್ಯವ್ಯಾಪಿ ಹೋಟೆಲ್ ಬಂದ್ ಮುಷ್ಕರ ಕಾಸರಗೋಡು ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆಯಿತು ಜಿಲ್ಲೆಯಾದ್ಯಂತ ಹೋಟೆಲ್, ಬೇಕರಿ ಹಾಗೂ ಗೂಡಂಗಡಿಗಳು ಮುಚ್ಚಿದ್ದವು.
ಪ್ರತಿಭಟನೆಯ ಅಂಗವಾಗಿ ಜಿಲ್ಲಾ ಘಟಕದ ವತಿಯಿಂದ ನಗರದ ಹೊಸ ಬಸ್ ನಿಲ್ದಾಣದವರೆಗೆ ಬೃಹತ್ ಮೆರವಣಿಗೆ ನಡೆಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು.
ಮುಷ್ಕರಕ್ಕೆ ಚಾಲನೆ ನೀಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಅಚ್ಯುತನ್ ನವರತ್ನ ಮಾತನಾಡಿ, “ಸತತ ಬೆಲೆ ಏರಿಕೆಯಿಂದ ಸಣ್ಣ ಹೋಟೆಲ್ ಉದ್ಯಮಿಗಳ ಬದುಕು ದುಸ್ತರವಾಗಿದೆ. ಸರ್ಕಾರ ದೊಡ್ಡ ಹೋಟೆಲ್ಗಳನ್ನು ಪೋಷಿಸಿ ಬಡವರ ಹಸಿವು ನೀಗಿಸುವ ಹೋಟೆಲ್ಗಳನ್ನು ಬಗ್ಗುಬಡಿಯುತ್ತಿದೆ. ಬೆಲೆ ಏರಿಕೆ ಹೀಗೆಯೇ ಮುಂದುವರಿದರೆ ತಿನಿಸುಗಳ ದರ ಹೆಚ್ಚಳ ಅನಿವಾರ್ಯ” ಎಂದು ಎಚ್ಚರಿಸಿದರು.
ಜಿಲ್ಲಾ ಕಾರ್ಯದರ್ಶಿ ಬಿಜು ಚುಳ್ಳಿಕರ ಮಾತನಾಡಿ, ಆಹಾರ ಕ್ಷೇತ್ರವನ್ನು ವಾಣಿಜ್ಯ ವಲಯವೆನ್ನದೆ ‘ಸೇವಾ ವಲಯ’ ಎಂದು ಪರಿಗಣಿಸಬೇಕು. ಇದು ಕೇವಲ ಸಾಂಕೇತಿಕ ಹೋರಾಟವಾಗಿದ್ದು, ಮುಂದಿನ ದಿನಗಳಲ್ಲಿ ಇತರ ವ್ಯಾಪಾರಿ ಸಂಘಟನೆಗಳೊಂದಿಗೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು. ಜಿಲ್ಲಾಧ್ಯಕ್ಷ ರಘುವೀರ್ ಪೈ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಮುಖ ಪದಾಧಿಕಾರಿಗಳು ಭಾಗವಹಿಸಿದ್ದರು.