ಮಂಜೇಶ್ವರ: ಹೊಸಂಗಡಿಯಿಂದ ಆನೆಕಲ್ಲು ಭಾಗಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯು ಈಗ ಸಾವಿನ ದಾರಿಯಾಗಿ ಮಾರ್ಪಡುತ್ತಿದೆಯೇ ಎಂಬ ಭೀತಿ ಸಾರ್ವಜನಿಕರಲ್ಲಿ ಮೂಡಿದೆ. ರಸ್ತೆಯುದ್ದಕ್ಕೂ ಹೆಮ್ಮರವಾಗಿ ಬೆಳೆದು ನಿಂತಿರುವ ಬೃಹತ್ ಮರಗಳು ಮತ್ತು ರಸ್ತೆಗೆ ವಾಲಿರುವ ಅವುಗಳ ಬೃಹತ್ ರೆಂಬೆಗಳು ಸಂಚಾರಿಗಳ ಪಾಲಿಗೆ “ತೂಗುಗತ್ತಿ”ಯಾಗಿ ಪರಿಣಮಿಸಿವೆ.
ಜೀವ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ
ಈ ರಸ್ತೆಯ ಇಕ್ಕೆಡೆಗಳಲ್ಲಿರುವ ದೈತ್ಯ ಮರಗಳು ರಸ್ತೆಯ ಮೇಲೆಯೇ ಬಾಗಿ ನಿಂತಿವೆ. ಬಸ್‌ಗಳು, ಲಾರಿಗಳಂತಹ ದೊಡ್ಡ ವಾಹನಗಳು ಈ ರಸ್ತೆಯಲ್ಲಿ ಹಾದು ಹೋಗುವಾಗ ರೆಂಬೆಗಳಿಗೆ ತಾಗಿ ಅಪಾಯ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಮಳೆ-ಗಾಳಿ ಬಂದಾಗ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಕಳೆದ ಮಳೆಗಾಲದಲ್ಲಿ ಇದೇ ರಸ್ತೆಯಲ್ಲಿ ಹಲವಾರು ಮರಗಳು ಬುಡಸಮೇತ ರಸ್ತೆಗೆ ಉರುಳಿ ಬಿದ್ದಿದ್ದವು. ಅಂದು ಹಲವು ವಾಹನಗಳು ಜಖಂಗೊಂಡಿದ್ದವು ಮಾತ್ರವಲ್ಲದೆ, ಹಲವಾರು ಸವಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಇಷ್ಟೆಲ್ಲಾ ಅವಾಂತರಗಳು ಸಂಭವಿಸಿದರೂ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಅತ್ಯಂತ ಆತಂಕಕಾರಿ ವಿಷಯವೆಂದರೆ, ಈ ಬೃಹತ್ ಮರಗಳ ರೆಂಬೆಗಳ ನಡುವೆಯೇ ಹೈ-ವೋಲ್ಟೇಜ್ ವಿದ್ಯುತ್ ತಂತಿಗಳು ಹಾದುಹೋಗಿವೆ.
ಗಾಳಿ-ಮಳೆ ಬಂದಾಗ ಮರದ ರೆಂಬೆಗಳು ವಿದ್ಯುತ್ ತಂತಿಯ ಮೇಲೆ ಬಿದ್ದರೆ ಇಡೀ ರಸ್ತೆಯೇ ವಿದ್ಯುತ್ ಮಯವಾಗುವ ಅಪಾಯವಿದೆ.
ದುರಂತದ ಮುನ್ಸೂಚನೆ ಎಂಬಂತೆ ಅಕಸ್ಮಾತ್ ಮರ ಬಿದ್ದರೆ ಕೇವಲ ಸಂಚಾರ ಸ್ಥಗಿತವಾಗುವುದು ಮಾತ್ರವಲ್ಲದೆ, ಭೀಕರ ಜೀವಹಾನಿ ಸಂಭವಿಸುವ ಸಾಧ್ಯತೆಯಿದೆ.
ಮಳೆಗಾಲ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಆಕಾಶಕ್ಕೆ ತೂಗುತ್ತಿರುವ ಈ ಮೃತ್ಯುವನ್ನು ತಡೆಯಲು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
”ಅಪಾಯ ಸಂಭವಿಸಿದ ನಂತರ ಪರಿಹಾರ ಘೋಷಿಸುವುದಕ್ಕಿಂತ, ಸಂಭವಿಸುವ ಮೊದಲೇ ಮುನ್ನೆಚ್ಚರಿಕೆ ವಹಿಸುವುದು ಇಲಾಖೆಯ ಕರ್ತವ್ಯ. ಕೂಡಲೇ ರಸ್ತೆಗೆ ಬಾಗಿರುವ ರೆಂಬೆಗಳನ್ನು ಕಡಿದು, ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಭವಿಸುವ ಯಾವುದೇ ಅನಾಹುತಕ್ಕೆ ಇಲಾಖೆಯೇ ನೇರ ಹೊಣೆಯಾಗಲಿದೆ ಎಂದು ಸ್ಥಳೀಯರು ಆಡಿ ಕೊಳ್ಳುತಿದ್ದಾರೆ.
ಈಗಲಾದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಹಾಗೂ ವಿದ್ಯುತ್ ಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಮಳೆಗಾಲದ ಆರ್ಭಟ ಶುರುವಾಗುವ ಮೊದಲೇ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.