ಮೇ 26ರಿಂದ ‘ಮಂಗಳೂರು ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್-2026’

ಮಂಗಳೂರು ರೈಫಲ್ ಕ್ಲಬ್ ವತಿಯಿಂದ ಆಯೋಜಿಸಲಾದ ಎರಡನೇ ಆವೃತ್ತಿಯ ‘ಮಂಗಳೂರು ಓಪನ್ ಶೂಟಿಂಗ್ ಚಾಂಪಿಯನ್‌ಶಿಪ್-2026’ ಮೇ 26ರಿಂದ 30ರವರೆಗೆ ನಡೆಯಲಿದೆ ಎಂದು ಕ್ಲಬ್‌ನ ಸ್ಥಾಪಕ ಕಾರ್ಯದರ್ಶಿ ಮುಕೇಶ್ ಕುಮಾರ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೂಟಿಂಗ್ ಕ್ರೀಡೆಯನ್ನು ತಳಮಟ್ಟದಿಂದ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರತಿಷ್ಠಿತ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ ಎಂದರು. ವಿವಿಧ ರಾಜ್ಯಗಳಿಂದ ಸುಮಾರು 450ಕ್ಕೂ ಅಧಿಕ ಶೂಟರ್‌ಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ಅರ್ಹತಾ ಸುತ್ತಿನ ಸ್ಪರ್ಧೆಗಳು ಕದ್ರಿ ಮಲ್ಲಿಕಟ್ಟೆಯ ಜುಗುಲ್ ಟವರ್ಸ್‌ನಲ್ಲಿರುವ ಮಂಗಳೂರು ರೈಫಲ್ ಕ್ಲಬ್‌ನಲ್ಲಿ ನಡೆಯಲಿದ್ದು, ಅಂತಿಮ ಹಂತದ ಪಂದ್ಯಗಳು ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿವೆ. 10 ಮೀಟರ್ ಏರ್ ರೈಫಲ್ ಹಾಗೂ ಏರ್ ಪಿಸ್ತೂಲ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.

ಚಾಂಪಿಯನ್‌ಶಿಪ್‌ನ ಪ್ರಮುಖ ಆಕರ್ಷಣೆಯಾಗಿ ಕರ್ನಾಟಕದ ಅಂತರಾಷ್ಟ್ರೀಯ ಮಟ್ಟದ ಶೂಟರ್‌ಗಳು ಭಾಗವಹಿಸಲಿದ್ದಾರೆ. ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಸಾಧಕ ಶೂಟರ್‌ಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಮುಕೇಶ್ ಕುಮಾರ್ ಹೇಳಿದರು.

ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೇನೆಯ ಕ್ರೀಡಾಪಟುಗಳಿಗೆ ವಿಶೇಷ ಆಹ್ವಾನ ನೀಡಲಾಗಿದ್ದು, ಅವರ ಗೌರವಾರ್ಥ ಪ್ರತ್ಯೇಕ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

2017ರಲ್ಲಿ ಸ್ಥಾಪನೆಯಾದ ಮಂಗಳೂರು ರೈಫಲ್ ಕ್ಲಬ್ ಈಗಾಗಲೇ 32 ರಾಷ್ಟ್ರೀಯ ಮಟ್ಟದ ಶೂಟರ್‌ಗಳನ್ನು ರೂಪಿಸಿದೆ. ಮಂಗಳೂರಿನಲ್ಲಿ ಶೂಟಿಂಗ್ ಕ್ರೀಡೆಯ ಬೆಳವಣಿಗೆಗೆ ಉತ್ತೇಜನ ನೀಡುವುದು ಹಾಗೂ ಸ್ಥಳೀಯ ಪ್ರತಿಭೆಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವುದು ಈ ಚಾಂಪಿಯನ್‌ಶಿಪ್‌ನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕ್ಲಬ್ ಸದಸ್ಯರಾದ ಆಶಿಷ್ ಶೆಟ್ಟಿ, ಗೋಪಾಲಕೃಷ್ಣ ಹಾಗೂ ನಿತೇಶ್ ಕುಮಾರ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!