ಮಂಜೇಶ್ವರ: ಅಪಘಾತದಲ್ಲಿ ಮೃತಪಟ್ಟ ತನ್ನ ಭಾವಿ ಪತಿಯ ಪಕ್ಕದಲ್ಲೇ ತನ್ನನ್ನೂ ಹೂಳಬೇಕೆಂಬ ಯುವತಿಯ ಅಂತಿಮ ಬಯಕೆಯನ್ನು ಕುಟುಂಬಸ್ಥರು ಈಡೇರಿಸಿದ್ದಾರೆ. ತಮಿಳುನಾಡಿನ ತಿರುನಲ್ವೇಲಿಯಲ್ಲಿ ಮೃತ ಯುವಕ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರತಿಶ್ರುತ ವಧು ಪ್ರಫುಲ್ಲಾ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸುವ ಮೂಲಕ ಈ ಪ್ರೇಮಿಗಳು ಸಾವಿನಲ್ಲೂ ಒಂದಾಗಿದ್ದಾರೆ.
ಮಂಜೇಶ್ವರದ ಕಿದೂರು ಕುಂಡಂಗೇರಡುಕ ನಿವಾಸಿ ಜಯಾನಂದ ಅವರ ಪುತ್ರಿ ಪ್ರಫುಲ್ಲಾ (26), ಕಳೆದ ಭಾನುವಾರ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್ ಉದ್ಯೋಗಿಯಾಗಿದ್ದ ತಮಿಳುನಾಡು ಮೂಲದ ಮಣಿ ಮತ್ತು ಪ್ರಫುಲ್ಲಾ ಅವರ ವಿವಾಹ ನಿಶ್ಚಯ ನಾಲ್ಕು ತಿಂಗಳ ಹಿಂದಷ್ಟೇ ನಡೆದಿತ್ತು. ಆದರೆ, ಹತ್ತು ದಿನಗಳ ಹಿಂದೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಣಿ ಮೃತಪಟ್ಟಿದ್ದರು. ಮಣಿಯ ಸಾವಿನಿಂದ ತೀವ್ರ ಖಿನ್ನತೆಗೊಳಗಾಗಿದ್ದ ಪ್ರಫುಲ್ಲಾ, “ನನ್ನನ್ನು ಮಣಿಯ ಪಕ್ಕದಲ್ಲೇ ಮಣ್ಣು ಮಾಡಬೇಕು” ಎಂದು ಡೆತ್ನೋಟ್ ಬರೆದಿಟ್ಟು ಜೀವನ ಕೊನೆಗಾಣಿಸಿದ್ದರು.
ಮಗಳ ಅಂತಿಮ ಆಸೆಯನ್ನು ಗೌರವಿಸಿದ ತಂದೆ ಜಯಾನಂದ ಮತ್ತು ಕುಟುಂಬಸ್ಥರು, ಮಣಿಯ ಮನೆಯವರನ್ನು ಸಂಪರ್ಕಿಸಿ ಒಪ್ಪಿಗೆ ಪಡೆದರು. ಸೋಮವಾರ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ, ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ತಮಿಳುನಾಡಿನ ವಳ್ಳಿಯೂರು ಗ್ರಾಮಕ್ಕೆ ಕೊಂಡೊಯ್ಯಲಾಯಿತು.
ಅಲ್ಲಿ ಸೋಮವಾರ ಸಂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಣಿಯ ಸಮಾಧಿಯ ಪಕ್ಕದಲ್ಲೇ ಪ್ರಫುಲ್ಲಾ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಈ ನೋವಿನ ವಿದಾಯಕ್ಕೆ ಸಾಕ್ಷಿಯಾದ ಎರಡೂ ಕುಟುಂಬದವರು ಮತ್ತು ಗ್ರಾಮಸ್ಥರ ಕಣ್ಣಾಲಿಗಳು ತೇವವಾಗಿದ್ದವು. ಪ್ರೀತಿಪಾತ್ರನ ಅಗಲಿಕೆ ತಾಳಲಾರದೆ ಪ್ರಾಣ ಬಿಟ್ಟ ಯುವತಿಯ ಅಂತಿಮ ಹಾರೈಕೆ ಕೊನೆಗೂ ಸಫಲವಾಯಿತು