ಮಂಗಳೂರು: 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ಖ್ಯಾತ ಕೊಂಕಣಿ ಸಾಹಿತಿ ಎಚ್.ಎಂ. ಪೆರ್ನಾಲ್ (ಹೆನ್ರಿ ಮೆಂಡೋನ್ಸಾ) ಅವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಮೇ 15ರಂದು ಸಂಜೆ 5:45ಕ್ಕೆ ನಗರದ ಟೌನ್ ಹಾಲ್ನಲ್ಲಿ ಅದ್ದೂರಿ ಸಮಾರಂಭ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಸಂಚಾಲಕ ಮೆಲ್ವಿನ್ ರೋಡ್ರಿಗಸ್ ತಿಳಿಸಿದ್ದಾರೆ.
ನಗರದ ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಎಂ. ಪೆರ್ನಾಲ್ ಅವರ ಸಾಹಿತ್ಯ ವಿಮರ್ಶೆ ಕೃತಿ ‘ಕೊಂಕಣಿ ಕಾವ್ಯಂ: ರೂಪಾಂ ಅನಿ ರೂಪಕಾಂ’ಗೆ 2025ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಎಂದು ಹೇಳಿದರು.
ಸಾಹಿತ್ಯ ವಿಮರ್ಶೆ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಕೊಂಕಣಿ ಕೃತಿ ಎಂಬ ಹೆಗ್ಗಳಿಕೆಗೆ ಈ ಕೃತಿ ಪಾತ್ರವಾಗಿದ್ದು, ಎಚ್.ಎಂ. ಪೆರ್ನಾಲ್ ಅವರು ಕರ್ನಾಟಕದ ನಾಲ್ಕನೇ ಕೊಂಕಣಿ ಸಾಹಿತಿಯಾಗಿ ಈ ಅತ್ಯುನ್ನತ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ತಿಳಿಸಿದರು.
ಸಂಜೆ 5:30ರಿಂದ ಉಸ್ತಾದ್ ರಫೀಕ್ ಖಾನ್ ಅವರ ತಂಡದಿಂದ ಸಿತಾರ್ ಫ್ಯೂಷನ್ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಎಡ್ಡಿ ಸಿಕ್ಕೇರಾ ಮತ್ತು ತಂಡದವರು ಪೆರ್ನಾಲ್ ಅವರ ಕವಿತೆಗಳ ಸಾದರೀಕರಣ ನಡೆಸಿಕೊಡಲಿದ್ದಾರೆ ಎಂದರು.
ಸಂಜೆ 7 ಗಂಟೆಗೆ ಶಕುಂತಲಾ ಆರ್. ಕಿಣಿ ಮತ್ತು ವಿಲ್ಸನ್ ಕಟೀಲ್ ಅವರು ಪ್ರಶಸ್ತಿ ವಿಜೇತ ಸಾಹಿತಿಯೊಂದಿಗೆ ವಿಶೇಷ ಸಂವಾದ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅನಿವಾಸಿ ಉದ್ಯಮಿ ಹಾಗೂ ಕೊಂಕಣಿ ಭಾಷಾಭಿಮಾನಿ ಮೈಕಲ್ ಡಿಸೋಜಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಖ್ಯಾತ ಕನ್ನಡ ಕವಿ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ. ಇದೇ ವೇಳೆ ವಿವಿಧ ಕೊಂಕಣಿ ಸಂಘಟನೆಗಳ ವತಿಯಿಂದ ಪೆರ್ನಾಲ್ ಅವರಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ಹೇಳಿದರು.
ಎಚ್.ಎಂ. ಪೆರ್ನಾಲ್ ಅವರು ಈವರೆಗೆ ನಾಲ್ಕು ಕವನ ಸಂಕಲನಗಳು, ಎರಡು ಕಥಾ ಸಂಕಲನಗಳು ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. 850ಕ್ಕೂ ಅಧಿಕ ಕವಿತೆಗಳು ಹಾಗೂ 2,000ಕ್ಕೂ ಹೆಚ್ಚು ಲೇಖನಗಳನ್ನು ರಚಿಸಿರುವ ಅವರು ‘ಕಿಟಾಳ್’ ಸಾಹಿತ್ಯಕ ಅಂತರ್ಜಾಲ ಪತ್ರಿಕೆಯ ಮೂಲಕ ಕೊಂಕಣಿ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ್ದಾರೆ ಎಂದು ಮೆಲ್ವಿನ್ ರೋಡ್ರಿಗಸ್ ಶ್ಲಾಘಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ಎಡ್ಡಿ ಸಿಕ್ವೇರಾ ಹಾಗೂ ಟೈಟಸ್ ನೊರೊನ್ಹಾ ಉಪಸ್ಥಿತರಿದ್ದರು.