ಹಾವೇರಿ, ಮೇ 12: ಜಿಲ್ಲೆಯ ಕಬ್ಬೂರು ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದ್ದು, ವ್ಯಕ್ತಿಯೊಬ್ಬರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.ನಿಂಗಪ್ಪ ಚನ್ನಬಸಪ್ಪ ಕರಿಗಾರ್ (40) ಕೊಲೆಯಾದ ವ್ಯಕ್ತಿಯಾಗಿದ್ದು, ಶಿವು ನಿಂಗಪ್ಪ ಪಟ್ಟೇದ ಎಂಬಾತನನ್ನು ಪ್ರಕರಣದ ಆರೋಪಿ ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಮೃತ ನಿಂಗಪ್ಪ ಹಾಗೂ ಆರೋಪಿ ಶಿವು ಮನೆಗಳು ಅಕ್ಕಪಕ್ಕದಲ್ಲಿದ್ದು, ಇಬ್ಬರಿಗೂ ಮದ್ಯಪಾನದ ಚಟವಿತ್ತು ಎನ್ನಲಾಗಿದೆ. ಹಳೆಯ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.ಸುಮಾರು ಒಂದು ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದಿದ್ದು, ಆ ವೇಳೆ ಆರೋಪಿ ಶಿವು ನಿಂಗಪ್ಪನ ತಲೆಗೆ ಗಾಯವಾಗುವಂತೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಬಳಿಕ ಗ್ರಾಮ ಹಿರಿಯರು ಮಧ್ಯಸ್ಥಿಕೆ ವಹಿಸಿ ಇಬ್ಬರ ನಡುವೆ ರಾಜಿ ಮಾಡಿಸಿದ್ದರು.
ಆದರೆ, ಸೋಮವಾರ ಬೆಳಿಗ್ಗೆ ಮತ್ತೆ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಏಕಾಏಕಿ ಆರೋಪಿ ಶಿವು ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ತೀವ್ರ ರಕ್ತಸ್ರಾವಗೊಂಡ ನಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬಳಿಕ “ನಾನೇ ಕೊಲೆ ಮಾಡಿದ್ದೇನೆ” ಎಂದು ಆರೋಪಿ ಶಿವು ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.