ಮಂಜೇಶ್ವರ: ತುಳುನಾಡಿನ ಸುಪ್ರಸಿದ್ಧ ಸೌಹಾರ್ದತಾ ತಾಣಗಳಲ್ಲಿ ಒಂದಾದ ಉದ್ಯಾವರ ಅರಸು ಮಂಜೀಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವವು ಅತ್ಯಂತ ಭಕ್ತಿ, ಶ್ರದ್ಧೆ ಹಾಗೂ ಹಿಂದೂ-ಮುಸ್ಲಿಂ ಭಾವೈಕ್ಯತೆಯೊಂದಿಗೆ ಅದ್ಧೂರಿಯಾಗಿ ನೆರವೇರಿತು.
ಈ ಕ್ಷೇತ್ರದ ವಿಶೇಷತೆಯೆಂಬಂತೆ, ಶತಮಾನಗಳ ಪ್ರಾಚೀನ ಪದ್ಧತಿಯನ್ನು ಈ ಬಾರಿಯೂ ಅಚ್ಚುಕಟ್ಟಾಗಿ ಪಾಲಿಸಲಾಯಿತು. ಜಾತ್ರೋತ್ಸವದ ಪ್ರಮುಖ ವಿಧಿವಿಧಾನಗಳ ಸಂದರ್ಭದಲ್ಲಿ ಸಿಂಹಾಸನ ಕಟ್ಟೆಯ ಬಲಭಾಗದಲ್ಲಿ ಕ್ಷೇತ್ರದ ಆಡಳಿತ ವರ್ಗದವರು ಹಾಗೂ ಎಡಭಾಗದಲ್ಲಿ ಮುಸ್ಲಿಂ ಬಾಂಧವರು (ಜಮಾಹತಿನವರು) ಆಸೀನರಾಗಿ ಇಡೀ ಉತ್ಸವವನ್ನು ಕಣ್ತುಂಬಿಕೊಂಡರು. ಧರ್ಮದ ಗಡಿಗಳನ್ನು ಮೀರಿ ಒಂದೇ ವೇದಿಕೆಯಲ್ಲಿ ಸೌಹಾರ್ದತೆಯಿಂದ ಕುಳಿತು ಜಾತ್ರೆ ನಡೆಸುವ ಈ ಸಂಪ್ರದಾಯವು ನಾಡಿನ ಸಾಮರಸ್ಯಕ್ಕೆ ಸಾಕ್ಷಿಯಾಯಿತು.
ಮೇ 9 ಕ್ಕೆ ಕ್ಷೇತ್ರದ ಧ್ವಜಾರೋಹಣದೊಂದಿಗೆ ವರ್ಷಾವಧಿ ಉತ್ಸವಕ್ಕೆ ಅಧಿಕೃತ ಚಾಲನೆ ದೊರಕಿ
ಮೇ 11 ಮತ್ತು 12 ನಾಡಿನಾದ್ಯಂತ ಸಾವಿರಾರು ಭಕ್ತರು ಪಾಲ್ಗೊಂಡ ಐತಿಹಾಸಿಕ ‘ವಾರ್ಷಿಕ ಬಂಡಿ ಉತ್ಸವ’ ಅತ್ಯಂತ ಸಂಭ್ರಮದಿಂದ ಜರುಗಿತು.
ಮೇ 15 ರಂದು ಧ್ವಜ ಅವರೋಹಣದೊಂದಿಗೆ ಈ ಸಾಲಿನ ಜಾತ್ರೋತ್ಸವಕ್ಕೆ ಅಧಿಕೃತವಾಗಿ ತೆರೆ ಬೀಳಲಿದೆ.
ಈ ಐತಿಹಾಸಿಕ ಕ್ಷಣಗಳಿಗೆ ಕ್ಷೇತ್ರದ ಪ್ರಮುಖರಾದ ಕಿರಣ್ ಶೆಟ್ಟಿ, ಸಂಜೀವ ಶೆಟ್ಟಿ, ಉಮೇಶ್ ಪೂಮಣ್ಣು, ತಿಮ್ಮ ಭಂಡಾರಿ, ಕುಂಞಣ್ಣ ಚೌಟ, ಮಂಜ ರೈ ಸೇರಿದಂತೆ ಪದಾಧಿಕಾರಿಗಳು ಹಾಗೂ ಊರಿನ ಸಮುದಾಯದ ಪ್ರಮುಖರು ಸಾಕ್ಷಿಯಾದರು.
ಜಾತಿ-ಮತಗಳ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಈ ‘ಹಿಂದೂ-ಮುಸ್ಲಿಂ ಜಾತ್ರೆ’ಯು ಸಮಾಜಕ್ಕೆ ಪ್ರೀತಿ ಮತ್ತು ಸಹಬಾಳ್ವೆಯ ಮಹತ್ತರ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾಗಿದೆ.