ಪ್ರಧಾನಿ ಅಧಿಕಾರ ತ್ಯಜಿಸಿದರೆ ಜನರಿಗೆ ಸುಖ ಸಿಗುತ್ತದೆ: ಬಿ.ರಮಾನಾಥ ರೈ

ಮಂಗಳೂರು:ಸಂಕಷ್ಟದ ಸಮಯದಲ್ಲಿ ದೇಶದ ಜನರು ತ್ಯಾಗ ಮಾಡಬೇಕು ಎಂದು ಹೇಳುವ ಕೇಂದ್ರ ಸರ್ಕಾರಕ್ಕೆ ಸಾಮಾನ್ಯ ಜನರ ನೋವು ಅರ್ಥವಾಗುತ್ತಿಲ್ಲ. ಜನರು ತ್ಯಾಗ ಮಾಡುವುದಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಧಿಕಾರವನ್ನು ತ್ಯಾಗ ಮಾಡಿದರೆ ದೇಶದ ಜನರಿಗೆ ಸುಖ ಸಿಗುತ್ತದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ತೀವ್ರ ವಾಗ್ದಾಳಿ ನಡೆಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರ್ಥಿಕ ಹಾಗೂ ಶೈಕ್ಷಣಿಕ ನೀತಿಗಳನ್ನು ತೀವ್ರವಾಗಿ ಟೀಕಿಸಿದರು.

“ಅಚ್ಚೇ ದಿನ್, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಚೌಕಿದಾರ್, ವಿಕಸಿತ್ ಭಾರತ್ ಎಂಬ ಘೋಷಣೆಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗ್ಯಾಸ್ ಸಬ್ಸಿಡಿ ನೀಡಿ ಜನರಿಗೆ ನೆರವಾಗಿದ್ದರು. ಆದರೆ ಈಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ಸಹಿಸಿಕೊಳ್ಳಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ವಾಣಿಜ್ಯ ಗ್ಯಾಸ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಸಿ ಮಧ್ಯಮ ವರ್ಗದವರ ಬದುಕನ್ನು ಸಂಕಷ್ಟಕ್ಕೆ ತಳ್ಳಲಾಗಿದೆ” ಎಂದು ಆರೋಪಿಸಿದರು.

“ಹೆಣ್ಣುಮಕ್ಕಳಿಗೆ ಬಂಗಾರವೆಂದರೆ ಕೇವಲ ಆಭರಣವಲ್ಲ; ಅದು ಗೌರವ ಮತ್ತು ಸಂಕಷ್ಟದ ಸಮಯದ ಭದ್ರತೆಯ ಸಂಕೇತ. ಅದರ ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಬಂಗಾರ ಬಳಸದಿರಿ ಎನ್ನುವುದು ಮಹಿಳೆಯರ ಭಾವನೆಗಳಿಗೆ ಧಕ್ಕೆ ತರುವ ಮಾತು” ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಾಗ ಬಿಜೆಪಿ ತೀವ್ರ ಟೀಕೆ ಮಾಡುತ್ತಿತ್ತು. ಆದರೆ ಇಂದು ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದ್ದು, ಷೇರು ಮಾರುಕಟ್ಟೆಯೂ ತಲ್ಲಣಗೊಂಡಿದೆ ಎಂದು ದೂರಿದರು.

ಅಮೆರಿಕಾ–ಇಸ್ರೇಲ್ ಸಂಘರ್ಷದ ನೆಪ ಹೇಳಿ ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದೆ. ಸರ್ಕಾರಕ್ಕೆ ದೊಡ್ಡ ಕಂಪನಿಗಳ ಮೇಲಷ್ಟೇ ಕಾಳಜಿ ಇದ್ದು, ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಗಮನವಿಲ್ಲ ಎಂದು ಆರೋಪಿಸಿದರು.

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯ……!

ನೀಟ್ ಪರೀಕ್ಷೆಯಲ್ಲಿ ನಿರಂತರವಾಗಿ ಅಕ್ರಮಗಳು ಬೆಳಕಿಗೆ ಬರುತ್ತಿರುವುದು ಯುವಜನರ ಭವಿಷ್ಯಕ್ಕೆ ಮಾರಕವಾಗಿದೆ. ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ದೇಶದ ಶಿಕ್ಷಣ ವ್ಯವಸ್ಥೆ ಹದಗೆಡುತ್ತಿದ್ದರೂ ಕೇಂದ್ರ ಶಿಕ್ಷಣ ಸಚಿವರು ಮಾಧ್ಯಮಗಳನ್ನು ಎದುರಿಸಲು ಹಿಂಜರಿಯುತ್ತಿರುವುದು ಅವರ ಅಸಮರ್ಥತೆಯ ಸಂಕೇತವಾಗಿದೆ. ಕೆಳಮಟ್ಟದ ಅಧಿಕಾರಿಗಳನ್ನು ಮಾತ್ರ ಬಲಿಪಶು ಮಾಡುವ ಬದಲು, ಅಕ್ರಮದ ಹಿಂದೆ ಇರುವ ದೊಡ್ಡ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ನೀಟ್ ಸೇರಿದಂತೆ ಶಿಕ್ಷಣ ಕ್ಷೇತ್ರದ ಎಲ್ಲಾ ಹಗರಣಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ, ಬಾಧಿತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಮಮತಾ ಗಟ್ಟಿ, ಬೇಬಿ ಕುಂದರ್, ಜಯಶೀಲ ಅಡ್ಯಂತಾಯ, ವಿಕಾಸ್ ಶೆಟ್ಟಿ, ಶುಭೋದ್ ಆಳ್ವ, ಶಬೀರ್ ಸಿದ್ದಕಟ್ಟೆ ಹಾಗೂ ಅಪ್ಪಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!