ಮಂಗಳೂರು : ಸಿಟಿ ಸೆಂಟರ್ ಪ್ರಸ್ತುತಪಡಿಸುವ ದಕ್ಷಿಣ ಕನ್ನಡ ಜಿಲ್ಲಾ ಫಿಲಾಟೆಲಿಕ್ಸ್ ಮತ್ತು ನುಮಿಸ್ಮ್ಯಾಟಿಕ್ಸ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಮೂರು ದಿನಗಳ ಅಪರೂಪದ “ವಿಂಟೇಜ್ ವೈಬ್ಸ್” ವಸ್ತು ಪ್ರದರ್ಶನವು ಮೇ 15ರಿಂದ 17ರವರೆಗೆ ಮಂಗಳೂರಿನ ಸಿಟಿ ಸೆಂಟರ್ ಮಾಲ್ ನ ನೆಲ ಅಂತಸ್ತಿನಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಫಿಲಾಟೆಲಿಕ್ಸ್ ಮತ್ತು ನುಮಿಸ್ಮ್ಯಾಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಪ್ರಭಾಕರ್ ಕಾಮತ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತವಾಗಿ ವೀಕ್ಷಣೆಗೆ ಲಭ್ಯವಿರಲಿದೆ ಎಂದರು.
ಪ್ರದರ್ಶನದಲ್ಲಿ ಪುರಾತನ ನಾಣ್ಯಗಳು, ಹಳೆಯ ಕರೆನ್ಸಿಗಳು, ಅಪರೂಪದ ಅಂಚೆ ಚೀಟಿಗಳು, ಪುರಾತನ ಗಡಿಯಾರಗಳು, ವಸ್ತು ಶಿಲ್ಪಗಳು ಸೇರಿದಂತೆ ಅನೇಕ ಐತಿಹಾಸಿಕ ಹಾಗೂ ಅಪರೂಪದ ಸಂಗ್ರಹಿತ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ. ಮರೆತುಹೋದ ಜಗತ್ತಿನ ವಿಸ್ಮಯಗಳನ್ನು ಹತ್ತಿರದಿಂದ ನೋಡುವ ಅಪೂರ್ವ ಅವಕಾಶವನ್ನು ಈ ಪ್ರದರ್ಶನ ನಾಗರಿಕರಿಗೆ ಒದಗಿಸಲಿದೆ ಎಂದು ಹೇಳಿದರು.
ಪುಟಾಣಿಗಳಿಂದ ಹಿಡಿದು ವಯೋವೃದ್ಧರ ತನಕ ಎಲ್ಲ ವಯೋಮಾನದವರಿಗೂ ಈ ಪ್ರದರ್ಶನ ವಿಶೇಷ ಅನುಭವ ನೀಡಲಿದ್ದು, ಮಕ್ಕಳಿಗೆ ಗತಕಾಲದ ವಸ್ತುಗಳ ಪರಿಚಯ ಮಾಡಿಸಿ ಅವುಗಳ ಮಹತ್ವವನ್ನು ತಿಳಿಸಲು ಪೋಷಕರಿಗೆ ಉತ್ತಮ ವೇದಿಕೆಯಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಕಂಡಿದ್ದ ಹಲವಾರು ವಸ್ತುಗಳನ್ನು ನೇರವಾಗಿ ಕಣ್ತುಂಬಿಕೊಳ್ಳುವ ಅವಕಾಶವೂ ಇಲ್ಲಿದೆ ಎಂದರು.
ಬ್ರಿಟಿಷ್ ಇಂಡಿಯಾ ಕಾಲದ ನಾಣ್ಯಗಳಿಂದ ಆರಂಭಿಸಿ ತಾಮ್ರ, ನಿಕ್ಕೆಲ್, ಬ್ರಾಸ್ ಸೇರಿದಂತೆ ವಿವಿಧ ಲೋಹಗಳ ಅಪರೂಪದ ನಾಣ್ಯಗಳು ಪ್ರದರ್ಶನದಲ್ಲಿ ಇರಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕಿರಣ್ ಶೈಣೈ, ಸಂತೋಷ್ ಪ್ರಭು, ರಿಷಿತಾ, ವೈಶಾಲಿ, ವೆಂಕಟೇಶ್ ಪ್ರಭು ಹಾಗೂ ಬೈಕಾಡಿ ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.