ಮಂಜೇಶ್ವರ: ಇಲ್ಲಿಯ ಕಟ್ಟೆ ಬಜಾರ್ ತಿರುವಿನಲ್ಲಿ ಇಂದು ಅನಿರೀಕ್ಷಿತ ಅಪಘಾತವೊಂದು ಸಂಭವಿಸಿದೆ.ಹೊಸಂಗಡಿಯಿಂದ ಮಂಜೇಶ್ವರದತ್ತ ತೆರಳುತ್ತಿದ್ದ ಕಾರಿನ ಒಳಗೆ ಹಠಾತ್ತನೆ ಇಲಿಯೊಂದು ಕಾಣಿಸಿಕೊಂಡಿದ್ದೇ ಚಾಲಕನ ಗಾಬರಿಗೆ ಕಾರಣವಾಯಿತು.

ಚಾಲಕನ ಕಾಲಿನ ಬಳಿ ಇಲಿ ಚಲಿಸುತ್ತಿದ್ದಂತೆಯೇ ಕಸಿವಿಸಿಗೊಂಡ ಚಾಲಕ ವಾಹನದ ಮೇಲಿನ ಹಿಡಿತ ಕಳೆದುಕೊಂಡರು. ನಿಯಂತ್ರಣ ತಪ್ಪಿದ ಕಾರು, ರಸ್ತೆ ಬದಿಯಲ್ಲಿ ನಿಂತಿದ್ದ ಸ್ಕೂಟರ್ ಸವಾರನಿಗೆ ಡಿಕ್ಕಿ ಹೊಡೆದು, ತದನಂತರ ಸಮೀಪವಿದ್ದ ಹಳೆಯ ಕಟ್ಟಡದ ಟೈಲರ್ ಅಂಗಡಿಯೊಳಗೆ ನುಗ್ಗಿತು. ಅದೃಷ್ಟವಶಾತ್, ಫೋನ್ ಮಾತನಾಡಲು ದ್ವಿಚಕ್ರ ವಾಹನದಿಂದ ಇಳಿದಿದ್ದ ಸವಾರ ಕ್ಷಣಾರ್ಧದಲ್ಲಿ ಪಕ್ಕಕ್ಕೆ ಸರಿಯುವ ಮೂಲಕ ದೊಡ್ಡ ಅವಘಡದಿಂದ ಪಾರಾದರು.

ಘಟನೆಯಲ್ಲಿ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಂಗಡಿ ಹಾಗೂ ಕಾರಿಗೆ ಭಾರೀ ಹಾನಿಯಾಗಿದೆ. ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯದಲ್ಲಿ ನೆರವಾದರು.



