ತಿರುವನಂತಪುರಂ: ಈ ಬಾರಿ ಕೇರಳಕ್ಕೆ ಮೇ 26ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುವ ಮುಂಗಾರು, ಈ ಬಾರಿ ವಾಡಿಕೆಗಿಂತ ಮುಂಚಿತವಾಗಿಯೇ ಆಗಮಿಸುವ ಸಾಧ್ಯತೆ ಇದೆ.
ಮುಂದಿನ 24 ಗಂಟೆಗಳಲ್ಲಿ ಬಂಗಾಳ ಕೊಲ್ಲಿಯ ದಕ್ಷಿಣ ಭಾಗ ಹಾಗೂ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಮುಂಗಾರು ಚಟುವಟಿಕೆಗಳು ಚುರುಕುಗೊಳ್ಳಲಿದ್ದು, ಮೇ 24ರೊಳಗೆ ಕೇರಳ ತಲುಪುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಮುಂಗಾರು ಉತ್ತರದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಕೇರಳ ಸೇರಿದಂತೆ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಅನಾಹುತಗಳೂ ಸಂಭವಿಸಿರುವುದಾಗಿ ವರದಿಯಾಗಿದೆ.
ಈ ವರ್ಷ ದೇಶದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಅಂದಾಜಿಸಿದೆ. 1971ರಿಂದ 2020ರವರೆಗೆ ಮುಂಗಾರು ಅವಧಿಯಲ್ಲಿ ದೇಶದಲ್ಲಿ ಸರಾಸರಿ 87 ಸೆಂ.ಮೀ ಮಳೆಯಾಗುತ್ತಿತ್ತು. ಈ ಬಾರಿಯೂ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.
ಎಲ್ ನಿನೋ ಪರಿಣಾಮ ದುರ್ಬಲವಾಗುತ್ತಿರುವುದು ಹಾಗೂ ಸಮುದ್ರದ ತಾಪಮಾನದಲ್ಲಿ ಉಂಟಾಗಿರುವ ಬದಲಾವಣೆಗಳಿಂದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಮುಂಗಾರು ಪೂರ್ವ ಮಳೆಯ ಅಬ್ಬರ ಜೋರಾಗಿದ್ದು, ಕೆಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿಯೂ ನಿರ್ಮಾಣವಾಗಿದೆ.