ಪಂಪಾ ನದಿಗೆ ಬಟ್ಟೆ, ತ್ಯಾಜ್ಯ ಎಸೆದರೆ ₹5,000 ದಂಡ

ಶಬರಿಮಲೆ: ಪಂಪಾ ನದಿಗೆ ಬಟ್ಟೆ, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ತ್ಯಾಜ್ಯಗಳನ್ನು ಎಸೆಯುವುದನ್ನು ನಿಷೇಧಿಸಿ ಶಬರಿಮಲೆ ಹೆಚ್ಚುವರಿ ಜಿಲ್ಲಾಧಿಕಾರಿ ದಿಲೀಪ್ ಕೆ. ಕೈನಿಕ್ಕರ ಆದೇಶ ಹೊರಡಿಸಿದ್ದಾರೆ. ನಿಯಮ ಉಲ್ಲಂಘಿಸುವವರಿಗೆ ಸ್ಥಳದಲ್ಲೇ ಗರಿಷ್ಠ ₹5,000 ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

2026-27ನೇ ಸಾಲಿನ ಮಂಡಲ-ಮಕರಜ್ಯೋತಿ ಯಾತ್ರೆಗೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಶಬರಿಮಲೆ ಯಾತ್ರೆಗೂ ಮುನ್ನ ಪಂಪಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದು ಸಂಪ್ರದಾಯವಾಗಿದೆ. ಈ ವೇಳೆ ಬಳಸಿದ ಬಟ್ಟೆಗಳನ್ನು ನದಿ ಹಾಗೂ ಸ್ನಾನಘಟ್ಟಗಳಲ್ಲಿ ಎಸೆಯುತ್ತಿರುವುದರಿಂದ ಪ್ರತಿದಿನ ಟನ್‌ಗಟ್ಟಲೆ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಮೂಲ ಕಲುಷಿತಗೊಳ್ಳುವುದರ ಜತೆಗೆ ಪರಿಸರ ಹಾನಿ ಮತ್ತು ಜಲಜನ್ಯ ರೋಗಗಳ ಹರಡುವ ಆತಂಕ ಎದುರಾಗಿದೆ.

ಪಂಪಾ, ನಿಲಕ್ಕಲ್, ಸನ್ನಿಧಾನಂ ಸೇರಿದಂತೆ ನದಿಯ ಕೆಳಭಾಗದ ಜನರಿಗೂ ಪಂಪಾ ನದಿಯೇ ಪ್ರಮುಖ ಜಲಮೂಲವಾಗಿರುವ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಟ್ಟೆ, ವೈಯಕ್ತಿಕ ವಸ್ತುಗಳು, ಪ್ಲಾಸ್ಟಿಕ್ ಸೇರಿದಂತೆ ಯಾವುದೇ ಘನ ಅಥವಾ ಜೈವಿಕ ತ್ಯಾಜ್ಯಗಳನ್ನು ನದಿ, ಉಪನದಿಗಳು, ಸ್ನಾನಘಟ್ಟ ಹಾಗೂ ನದಿ ದಡಗಳಲ್ಲಿ ಎಸೆಯುವಂತಿಲ್ಲ. ದಂಡ ವಿಧಿಸಿದ 15 ದಿನಗಳೊಳಗೆ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವಸೂಲಾದ ದಂಡದ ಮೊತ್ತವನ್ನು ಪಂಚಾಯತ್ ನಿಧಿಗೆ ಜಮೆ ಮಾಡಿ, ಶಬರಿಮಲೆ ಮತ್ತು ಪಂಪಾ ಪ್ರದೇಶಗಳ ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ ಹಾಗೂ ನದಿ ಸ್ವಚ್ಛತಾ ಕಾರ್ಯಗಳಿಗೆ ಬಳಸಲಾಗುತ್ತದೆ. ನಿಯಮಗಳ ಕುರಿತು ಭಕ್ತರಿಗೆ ಅರಿವು ಮೂಡಿಸಲು ವಿವಿಧ ಭಾಷೆಗಳಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚಾರ ನಡೆಸುವಂತೆ ಹಾಗೂ ಸೂಚನಾ ಫಲಕಗಳನ್ನು ಅಳವಡಿಸುವಂತೆ ದೇವಸ್ವಂ ಮಂಡಳಿ ಮತ್ತು ಸಂಬಂಧಪಟ್ಟ ಇಲಾಖೆಗಳಿಗೂ ಸೂಚಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!