ಮಂಗಳೂರು: ಇಂಧನ ದರ ಏರಿಕೆ ಕೇಂದ್ರದ ವೈಫಲ್ಯ – ಐವನ್ ಡಿ’ಸೋಜ

ಮಂಗಳೂರು: ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯವೇ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರಾದ ಐವನ್ ಡಿ’ಸೋಜ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಮುಗಿದ ತಕ್ಷಣವೇ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ದರಗಳನ್ನು ಏರಿಸಲಾಗಿದೆ. ಜನರ ಸಂಕಷ್ಟಗಳನ್ನು ನಿವಾರಿಸುವ ಬದಲು ಕೇಂದ್ರ ಸರ್ಕಾರ ಬೆಲೆ ಏರಿಕೆಯ ಹೊರೆ ಜನರ ಮೇಲೆ ಹಾಕಿದೆ ಎಂದು ಆರೋಪಿಸಿದರು.

ಇರಾನ್–ಪ್ಯಾಲೆಸ್ಟೈನ್ ಯುದ್ಧ ಪರಿಸ್ಥಿತಿಯನ್ನು ನೆಪವನ್ನಾಗಿ ಮಾಡಿಕೊಂಡು ದೇಶದಲ್ಲಿ ಇಂಧನ ದರ ಏರಿಕೆ ಮಾಡಲಾಗಿದೆ. ಯುದ್ಧವು ಭಾರತಕ್ಕೆ ನೇರ ಸಂಬಂಧ ಹೊಂದಿರದಿದ್ದರೂ, ಯುದ್ಧ ಆರಂಭವಾದ ಮರುದಿನವೇ ಎಲ್‌ಪಿಜಿ ಹಾಗೂ ಇಂಧನ ದರಗಳನ್ನು ಹೆಚ್ಚಿಸಲಾಗಿದೆ ಎಂದು ಅವರು ಟೀಕಿಸಿದರು.

ಕೇಂದ್ರ ಸರ್ಕಾರದ ವಿದೇಶಾಂಗ ನೀತಿ ಸಂಪೂರ್ಣ ವಿಫಲವಾಗಿದೆ. ಭಾರತ ಯಾವ ದೇಶದಿಂದ ತೈಲ ಖರೀದಿಸಬೇಕು ಎಂಬುದರ ಬಗ್ಗೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಸರ್ಕಾರಕ್ಕಿರಬೇಕು. ಆದರೆ ಅಮೆರಿಕದ ಒತ್ತಡಕ್ಕೆ ಮಣಿದು ದೇಶದ ಆರ್ಥಿಕ ನೀತಿಗಳನ್ನು ನಿರ್ಧರಿಸಲಾಗುತ್ತಿದೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು “ವಿಶ್ವಗುರು” ಆಗುವ ಪ್ರಯತ್ನದಲ್ಲಿ ದೇಶದ ಸಾಮಾನ್ಯ ಜನರ ಸಮಸ್ಯೆಗಳನ್ನು ಮರೆತಿದ್ದಾರೆ. ದೇಶದ ಹಿತಾಸಕ್ತಿಗಿಂತ ಅಂತಾರಾಷ್ಟ್ರೀಯ ರಾಜಕೀಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಪರಿಣಾಮವಾಗಿ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.

ಮಂಗಳೂರಿನಲ್ಲಿ ಎಲ್‌ಪಿಜಿ ದರದಲ್ಲಿ ಲೀಟರ್‌ಗೆ ಸುಮಾರು 40 ರಿಂದ 45 ರೂಪಾಯಿ ಏರಿಕೆಯಾಗಿದ್ದು, ಸಾವಿರಾರು ಆಟೋ ರಿಕ್ಷಾ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದಲ್ಲಿರುವ ಸುಮಾರು 8 ಸಾವಿರ ರಿಕ್ಷಾಗಳಲ್ಲಿ 4 ಸಾವಿರಕ್ಕೂ ಅಧಿಕ ರಿಕ್ಷಾಗಳು ಎಲ್‌ಪಿಜಿ ಬಳಸಿ ಸಂಚರಿಸುತ್ತಿವೆ. ದಿನಕ್ಕೆ ಐದು ಲೀಟರ್ ಗ್ಯಾಸ್ ಬಳಕೆ ಮಾಡುವ ಚಾಲಕರಿಗೆ ಹೆಚ್ಚುವರಿ ವೆಚ್ಚದ ಹೊರೆ ಬೀಳುತ್ತಿದೆ ಎಂದು ವಿವರಿಸಿದರು.

ಇಂಧನ ದರ ಏರಿಕೆಯಿಂದ ಸಾಮಾನ್ಯ ಜನರ ಜೀವನ ವೆಚ್ಚವೂ ಹೆಚ್ಚಾಗಿದೆ. ಹೋಟೆಲ್‌ಗಳಲ್ಲಿ ತಿಂಡಿ-ತಿನಿಸುಗಳ ದರ ಏರಿಕೆಯಾಗಿದ್ದು, ಕೆಲವು ಕಡೆಗಳಲ್ಲಿ ‘ಗ್ಯಾಸ್ ದರ’ ಹೆಸರಿನಲ್ಲಿ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ದೂರಿದರು.

ಹಲವು ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಲಭ್ಯತೆ ಸಮಸ್ಯೆಯೂ ಎದುರಾಗಿದ್ದು, ಕಾಳಸಂತೆಯಲ್ಲಿ ಮಾರಾಟ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರವನ್ನು ಏಕಾಏಕಿ 997 ರೂಪಾಯಿಗೆ ಏರಿಸಿರುವುದರಿಂದ ಹೋಟೆಲ್ ಉದ್ಯಮ ಹಾಗೂ ಸಣ್ಣ ವ್ಯಾಪಾರಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.

2014ರಲ್ಲಿ “ಅಚ್ಚೇ ದಿನ್” ಭರವಸೆ ನೀಡಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಇದೀಗ ಜನರಿಗೆ ಬೆಲೆ ಏರಿಕೆಯ ಹೊರೆ ಮಾತ್ರ ನೀಡಿದೆ ಎಂದು ಟೀಕಿಸಿದ ಅವರು, ಬಿಜೆಪಿ ನಾಯಕರು ಪೆಟ್ರೋಲ್ ಉಳಿಸುವ ಹೆಸರಿನಲ್ಲಿ ಸಾರ್ವಜನಿಕ ಸಾರಿಗೆ ಬಳಸುವ ನಾಟಕ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!