ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ತಳಮಟ್ಟದಿಂದ ಮತ್ತಷ್ಟು ಬಲಪಡಿಸಲು ಹಾಗೂ ಗ್ರಾಮೀಣ ಭಾಗದ ಜನರಿಗೆ ತಜ್ಞ ವೈದ್ಯಕೀಯ ಸೇವೆಗಳನ್ನು ಮನೆಬಾಗಿಲಿಗೇ ತಲುಪಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರ ಅತ್ಯಂತ ಸ್ವಾಗತಾರ್ಹ.
ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ವಿಸ್ತರಿಸುವ ಉದ್ದೇಶದಿಂದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿರುವುದು ಶ್ಲಾಘನೀಯ. ಇದರ ಮೂಲಕ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ, ತಜ್ಞ ವೈದ್ಯರ ಸೇವೆ ಹಾಗೂ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಲಭ್ಯವಾಗಲಿದ್ದು, ಇದರ ನೇರ ಪ್ರಯೋಜನ ಜನಸಾಮಾನ್ಯರಿಗೆ ದೊರೆಯಲಿದೆ. ಸ್ಥಳೀಯ ಮಟ್ಟದಲ್ಲೇ ಉಚಿತವಾಗಿ ತಜ್ಞ ವೈದ್ಯರ ಚಿಕಿತ್ಸೆ ಹಾಗೂ ಸುಧಾರಿತ ರೋಗನಿರ್ಣಯ ಸೌಲಭ್ಯಗಳು ಸಿಗುವುದರಿಂದ ಗ್ರಾಮೀಣ ಜನರ ಆರೋಗ್ಯ ಭದ್ರತೆ ಮತ್ತಷ್ಟು ಬಲಗೊಳ್ಳಲಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬೆಳ್ತಂಗಡಿ ತಾಲೂಕು ಆಸ್ಪತ್ರೆ, ಮೂಡಬಿದ್ರೆ ಆರೋಗ್ಯ ಕೇಂದ್ರ ಹಾಗೂ ವಿಟ್ಲ ಸಮುದಾಯ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಗಳೊಂದಿಗೆ ಕರಾರು ಒಪ್ಪಂದದ ಮೂಲಕ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿರುವುದು ದೂರದೃಷ್ಟಿಯ ನಿರ್ಧಾರವಾಗಿದೆ. ವೈದ್ಯಕೀಯ ಕಾಲೇಜುಗಳೇ ಸ್ವಯಂಪ್ರೇರಿತವಾಗಿ ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಿದ್ದು, ಸರ್ಕಾರದಿಂದ ಯಾವುದೇ ಅನುದಾನ ನೀಡಲಾಗುವುದಿಲ್ಲ ಎಂಬುದು ಗಮನಾರ್ಹ.
ಆರೋಗ್ಯ ಕೇಂದ್ರಗಳ ಸಂಪೂರ್ಣ ಆಡಳಿತಾತ್ಮಕ ನಿಯಂತ್ರಣ ಸರ್ಕಾರದ ವೈದ್ಯಾಧಿಕಾರಿಗಳ ಬಳಿಯೇ ಮುಂದುವರಿಯಲಿದ್ದು, ಯಾವುದೇ ನಿಯಮ ಉಲ್ಲಂಘನೆ ನಡೆಯದಂತೆ ಸರ್ಕಾರ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಲಿದೆ. ಖಾಸಗಿ ಸಂಸ್ಥೆಗಳು ಕೇವಲ ವೈದ್ಯಕೀಯ ಸೇವೆಗಳನ್ನು ಒದಗಿಸುವ ಪಾತ್ರವನ್ನು ಮಾತ್ರ ನಿರ್ವಹಿಸಲಿವೆ. ಜನಸಾಮಾನ್ಯರಿಗೆ ಗುಣಮಟ್ಟದ, ಸುಲಭ ಹಾಗೂ ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವ ರಾಜ್ಯ ಸರ್ಕಾರದ ಈ ಜನಪರ ನಿರ್ಧಾರ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ.
ಕೆಲ ಸಂಘಟನೆಗಳಿಂದ ಸುಳ್ಳು ಪ್ರಚಾರ: “ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಮಾರಾಟ ಮಾಡಲಾಗುತ್ತಿದೆ” ಎಂದು ಕೆಲ ಸಂಘಟನೆಗಳು ನಕಾರಾತ್ಮಕ ಹಾಗೂ ಜನರಲ್ಲಿ ಗೊಂದಲ ಸೃಷ್ಟಿಸುವ ಉದ್ದೇಶದಿಂದ ಸುಳ್ಳು ಪ್ರಚಾರ ನಡೆಸುತ್ತಿರುವುದು ವಿಷಾದನೀಯ. ಇದು ಸಂಪೂರ್ಣ ಸತ್ಯಕ್ಕೆ ದೂರವಾದ ಆರೋಪವಾಗಿದೆ.ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಸ್ಥಳೀಯ ಮಟ್ಟದಲ್ಲೇ ಉತ್ತಮ ಚಿಕಿತ್ಸೆ, ತಜ್ಞ ವೈದ್ಯರ ಸಲಹೆ ಮತ್ತು ಉಚಿತ ಆರೋಗ್ಯ ಸೇವೆಗಳು ದೊರೆಯಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಆದರೆ ಕೆಲವರು ರಾಜಕೀಯ ಉದ್ದೇಶಕ್ಕಾಗಿ ಜನರಲ್ಲಿ ಗೊಂದಲ ಮತ್ತು ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ.
ಜನರು ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ, ಸರ್ಕಾರದ ಜನಪರ ಆರೋಗ್ಯ ಯೋಜನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಈ ಕ್ರಮವು ಜನಹಿತದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ.