ಕಲಾಭಿವಂದನೆಯ ಹಾದಿಯಲ್ಲಿ ಮತ್ತೊಂದು ಹೊಂಬೆಳಕು : ಬಾಲಪ್ರತಿಭೆ ಯತಿರಾಜ್ ರೈ

​”ವಿದ್ವತ್ವಂ ಚ ನೃಪತ್ವಂ ಚ ನೈವ ತುಲ್ಯಂ ಕದಾಚನ |
ಸ್ವದೇಶೇ ಪೂಜ್ಯತೇ ರಾಜಾ ವಿದ್ವಾನ್ ಸರ್ವತ್ರ ಪೂಜ್ಯತೇ ||”
​ರಾಜ ಪದವಿ ಮತ್ತು ವಿದ್ವತ್ತು ಎಂದಿಗೂ ಸಮಾನವಲ್ಲ; ರಾಜನಿಗೆ ತನ್ನ ದೇಶದಲ್ಲಿ ಮಾತ್ರ ಗೌರವ ದೊರೆತರೆ, ವಿದ್ವತ್ಪೂರ್ಣ ಕಲಾವಿದನು ಜಗದಗಲಕ್ಕೂ ಪೂಜಿಸಲ್ಪಡುತ್ತಾನೆ. ಇಂತಹ ಉನ್ನತ ಹಾದಿಯಲ್ಲಿ, ಕಲೆಯನ್ನೇ ಉಸಿರಾಗಿಸಿಕೊಂಡು ಬಾಲ್ಯದಲ್ಲೇ ಮಹತ್ಸಾಧನೆಯ ಕನಸು ಹೊತ್ತಿರುವ ಸವ್ಯಸಾಚಿ ಪ್ರತಿಭೆಯೇ ಯತಿರಾಜ್ ರೈ. ಸಾಂಸ್ಕೃತಿಕ ಪರಂಪರೆಯ ಗಣಿಯಾಗಿರುವ ನಮ್ಮ ಮಣ್ಣಿನಲ್ಲಿ, ಪ್ರತಿಭೆಗಳು ಜನ್ಮಜಾತ ಕಲಾ ಸಂಸ್ಕಾರದೊಂದಿಗೆ ಅರಳುತ್ತವೆ ಎಂಬುದಕ್ಕೆ ಈ ಯುವ ಚೇತನವೇ ಸಾಕ್ಷಿ. ಇವರ ಕಲಾಪಯಣವು ಕೇವಲ ಒಂದು ಚೌಕಟ್ಟಿಗೆ ಸೀಮಿತವಾಗದೆ, ತುಳುನಾಡಿನ ವೀರಕಲೆ ಯಕ್ಷಗಾನ ಮತ್ತು ಶಾಸ್ತ್ರೀಯ ಶಿಸ್ತಿನ ಭರತನಾಟ್ಯ ಎಂಬ ಎರಡು ಮಹಾನ್ ಧಾರೆಗಳ ಅಪೂರ್ವ ಸಂಗಮವಾಗಿದೆ.

ಯತಿರಾಜ್ ಅವರ ಸಾಧನೆಯಲ್ಲಿ ಭರತನಾಟ್ಯದ ಸಿದ್ಧಿಯು ವಿಶೇಷವಾಗಿ ಗಮನಸೆಳೆಯುತ್ತದೆ. ನೃತ್ಯವೆಂದರೆ ಕೇವಲ ದೇಹದ ಚಲನೆಯಲ್ಲ; ಅದು ಅಂತರಂಗದ ಅಭಿವ್ಯಕ್ತಿ. ಶಾಸ್ತ್ರೀಯ ನೃತ್ಯದ ಕಠಿಣ ಅಡವುಗಳು, ಮುದ್ರೆಗಳು ಮತ್ತು ಭಾವಾಭಿನಯದಲ್ಲಿ ಅವರು ತೋರುತ್ತಿರುವ ಪರಿಣತಿ ಬೆರಗು ಮೂಡಿಸುವಂತಿದೆ. ಈ ನಿರಂತರ ತಪಸ್ಸು ಅವರಿಗೆ ಅದ್ಭುತ ಏಕಾಗ್ರತೆ ಮತ್ತು ದೈಹಿಕ ನಮ್ಯತೆಯನ್ನು ನೀಡಿದೆ. ಒಬ್ಬ ಪುರುಷ ನರ್ತಕನಿಗೆ ಆವಶ್ಯಕವಾದ ಗಾಂಭೀರ್ಯ ಹಾಗೂ ಲಾಸ್ಯದ ಸೂಕ್ಷ್ಮ ಸಂವೇದನೆಗಳು ಇವರ ನೃತ್ಯದ ಪ್ರತಿ ಹೆಜ್ಜೆಯಲ್ಲೂ ಎದ್ದು ಕಾಣುತ್ತವೆ. ಈ ಶಾಸ್ತ್ರೀಯ ನೃತ್ಯದ ಪರಿಜ್ಞಾನವು ಅವರ ಯಕ್ಷಗಾನದ ಅಭಿನಯಕ್ಕೂ ಒಂದು ಹೊಸ ಆಯಾಮ ಹಾಗೂ ಘನತೆಯನ್ನು ಒದಗಿಸಿದೆ. ಇದರೊಂದಿಗೆ ಯಕ್ಷಗಾನದ ಜೀವಾಳವಾದ ಭಾಗವತಿಕೆಯಲ್ಲಿಯೂ ಅವರು ಪ್ರಖ್ಯಾತ ಭಾಗವತ ಮಾಂಬಾಡಿ ಅವರ ಮಾರ್ಗದರ್ಶನದಲ್ಲಿ ಪಳಗುತ್ತಿದ್ದಾರೆ. ಮೂರನೇ ತರಗತಿಯ ಎಳೆಹರೆಯದಲ್ಲೇ ಕಲಾ ದೀಕ್ಷೆ ಪಡೆದ ಈತ, ಇಂದು ವೇದಿಕೆಯ ಮೇಲೆ ತನ್ನ ಮಧುರ ಕಂಠಸಿರಿಯ ಮೂಲಕ ಸಭಿಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದ್ದಾನೆ.

ಮುಳಿಯಾರು ಗ್ರಾಮದ ಅಮೆಕ್ಕಾರು ಮನೆಯ ಶ್ರೀ ಗಂಗಾಧರ ರೈ ಮತ್ತು ಶ್ರೀಮತಿ ಸುಜಾತಾ ದಂಪತಿಗಳ ದ್ವಿತೀಯ ಪುತ್ರನಾದ ಯತಿರಾಜ್ ರೈ, ಸಂಸ್ಕಾರಯುತ ಕೌಟುಂಬಿಕ ಹಿನ್ನೆಲೆಯಿಂದ ಬಂದವರು. ಪ್ರಸ್ತುತ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಇವರು, ಶಿಕ್ಷಣದ ಒತ್ತಡದ ನಡುವೆಯೂ ಕಲೆಯನ್ನೇ ತಪಸ್ಸಾಗಿಸಿಕೊಂಡು ಎರಡನ್ನೂ ಸಮತೋಲನದಿಂದ ನಿಭಾಯಿಸುತ್ತಿರುವುದು ಶ್ಲಾಘನೀಯ. ಹತ್ತು ವರ್ಷಗಳ ಹಿಂದೆಯೇ (೩ನೇ ತರಗತಿಯಿಂದ) ಆರಂಭವಾದ ಈ ಪಯಣ ಇಂದು ಸುಭದ್ರ ಬುನಾದಿಯೊಂದಿಗೆ ಉನ್ನತ ಹಂತಕ್ಕೆ ತಲುಪಿದೆ. ಆಧುನಿಕ ತಂತ್ರಜ್ಞಾನದ ಅಬ್ಬರದ ನಡುವೆಯೂ ನಮ್ಮ ಸನಾತನ ಕಲೆಗಳನ್ನು ಅಪ್ಪಿಕೊಂಡಿರುವುದು ಇಂದಿನ ತಲೆಮಾರಿಗೆ ಒಂದು ಆದರ್ಶಪ್ರಾಯ ಸಂದೇಶ.

“ಅಭ್ಯಾಸಾದ್ಧಾರ್ಯತೇ ವಿದ್ಯಾ” – ಅಂದರೆ ನಿರಂತರ ಶ್ರಮ ಮತ್ತು ಅಭ್ಯಾಸದಿಂದ ಮಾತ್ರ ವಿದ್ಯಾಸಿದ್ಧಿ ಸಾಧ್ಯ. ಈ ಮಂತ್ರವನ್ನು ಅಕ್ಷರಶಃ ಪಾಲಿಸುತ್ತಿರುವ ಯತಿರಾಜ್, ಸಾಧನೆಯ ಹಾದಿಯಲ್ಲಿ ದಣಿವರಿಯದ ಹರಿಕಾರ.
​ನೃತ್ಯದ ನಾದಕ್ಕೂ, ಭಾಗವತಿಕೆಯ ಸುಮನೋಹರ ಸ್ವರಕ್ಕೂ ಏಕಕಾಲದಲ್ಲಿ ಮಿಡಿಯುವ ಇವರ ಪ್ರತಿಭೆ ಅನನ್ಯ. ಕಲೆಯೆಂಬ ಈ ಮಹಾಪಯಣದಲ್ಲಿ ಅವರು ಇನ್ನಷ್ಟು ಉತ್ತುಂಗಕ್ಕೇರಲಿ. ಭರತನಾಟ್ಯದ ಆ ನೃತ್ಯ ಲಹರಿ ಮತ್ತು ಯಕ್ಷಗಾನದ ಆ ವೀರಾವೇಶದ ನಾದವು ಜಗತ್ತಿನಾದ್ಯಂತ ಪ್ರತಿಧ್ವನಿಸಲಿ. ಅಮಕ್ಕಾರು ಮನೆಯ ಈ ಕಲಾ ಕಿರಣವು ಭವಿಷ್ಯದಲ್ಲಿ ಶ್ರೇಷ್ಠ ಕಲಾವಿದನಾಗಿ ಸಮಾಜಕ್ಕೆ ಬೆಳಕಾಗಲಿ. ಇವರ ಈ ಪರಿಶ್ರಮಕ್ಕೆ ಯೋಗ್ಯ ಮನ್ನಣೆ ದೊರೆತು, ಕಲಾಮಾತೆಯ ಕೃಪಾಶೀರ್ವಾದ ಸದಾ ಇರಲಿ ಎಂದು ಹಾರೈಸೋಣ.

======================
​✍️: ದಯಾನಂದ ರೈ ಕಳ್ವಾಜೆ
========°==============

SHARE
Loading spinner

Leave a Reply

Your email address will not be published. Required fields are marked *

error: Content is protected !!