ಮಂಗಳೂರು: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಕರಾವಳಿಯಲ್ಲಿನ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆಗ್ರಹಿಸಿದರು .
ಅವರು ಕದ್ರಿಯ “ವಿಶ್ವಶ್ರೀ” ಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಕಳೆದ ಒಂದು ವರ್ಷದಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಹಾಗೂ ಪರಿಣಾಮಕಾರಿ ಕ್ರಮಗಳಿಂದ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಡ್ರಗ್ಸ್ ಜಾಲ, ಅಕ್ರಮ ಮರಳುಗಾರಿಕೆ, ಅಕ್ರಮ ಮಸಾಜ್ ಪಾರ್ಲರ್, ಕ್ಲಬ್ಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ ಪೋಸ್ಟ್ಗಳಂತಹ ಚಟುವಟಿಕೆಗಳ ವಿರುದ್ಧ ಕೈಗೊಂಡ ಕ್ರಮಗಳಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಅಕ್ರಮ ಗೋಸಾಗಾಟ ಹಾಗೂ ಗೋಹತ್ಯೆ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ರೂ, ಇವು ಸಂಪೂರ್ಣವಾಗಿ ನಿಂತಿಲ್ಲ ಎಂಬ ಆತಂಕ ಕರಾವಳಿ ಭಾಗದ ಜನರಲ್ಲಿ ಇನ್ನೂ ಇದೆ ಎಂದು ಅವರು ತಿಳಿಸಿದರು.
“ಕರ್ನಾಟಕದಲ್ಲಿ ಗೋವಂಶ ಸಂರಕ್ಷಣೆ ಹಾಗೂ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ಕಾನೂನು ಜಾರಿಯಲ್ಲಿದ್ದು, ಅದನ್ನು ಕರಾವಳಿ ಭಾಗದಲ್ಲಿ ಇನ್ನಷ್ಟು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು” ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.
ರಾಜ್ಯದಲ್ಲಿ ಅಧಿಕೃತವಾಗಿ ಕಾನೂನುಬದ್ಧ ಕಸಾಯಿಖಾನೆಗಳು ಕೆಲವೇ ಕಡೆಗಳಲ್ಲಿದ್ದರೂ, ಅನೇಕ ಕಡೆಗಳಲ್ಲಿ ಅಕ್ರಮ ಕಸಾಯಿಖಾನೆಗಳು ಹಾಗೂ ಬೀಫ್ ಸ್ಟಾಲ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದರು. ಕಾನೂನು ಪ್ರಕಾರ ಹಸು, ಆಕಳು ಹಾಗೂ ಹೋರಿಗಳನ್ನು ಕೊಲ್ಲಲು ಅವಕಾಶವಿಲ್ಲ. 13 ವರ್ಷ ಮೇಲ್ಪಟ್ಟ ಎಮ್ಮೆ ಮತ್ತು ಕೋಣಗಳನ್ನು ಮಾತ್ರ ಪಶುವೈದ್ಯರ ಪ್ರಮಾಣಪತ್ರದ ಆಧಾರದ ಮೇಲೆ ವಧೆ ಮಾಡಬಹುದು. ಆದರೆ ಈ ನಿಯಮಗಳನ್ನು ಉಲ್ಲಂಘಿಸಿ ರಾಜ್ಯಾದ್ಯಂತ ಅಕ್ರಮ ಗೋಹತ್ಯೆ ಹಾಗೂ ಗೋಸಾಗಾಟ ನಡೆಯುತ್ತಿದೆ ಎಂದು ದೂರಿದರು.
ಮೇ ತಿಂಗಳೊಂದರಲ್ಲೇ ರಾಜ್ಯದಲ್ಲಿ 20ಕ್ಕೂ ಹೆಚ್ಚು ಗೋಸಾಗಾಟ ಮತ್ತು ಗೋಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಹೇಳಿದ ಅವರು, ಕರಾವಳಿ ಭಾಗದ ವಿಟ್ಲ, ಜೋಕಟ್ಟೆ, ಕಾಟಿಪಳ್ಳ, ಚೊಕ್ಕಬೆಟ್ಟು, ಕಣ್ಣೂರು, ಉಳ್ಳಾಲದ ಮುಕ್ಕಚೇರಿ ಹಾಗೂ ಕಸಬಾ ಬೆಂಗ್ರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಕ್ರಮ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಆರೋಪಿಸಿದರು.
“ನೂರಾರು ಬೀಫ್ ಸ್ಟಾಲ್ಗಳಿಗೆ ಇಲ್ಲಿಂದಲೇ ಮಾಂಸ ಪೂರೈಕೆ ಆಗುತ್ತಿದೆ. ಡ್ರಗ್ಸ್ ಜಾಲ ಮತ್ತು ಅಕ್ರಮ ದಂಧೆಗಳ ವಿರುದ್ಧ ಪೊಲೀಸರು ಕೈಗೊಳ್ಳುತ್ತಿರುವ ರೀತಿಯಲ್ಲೇ ಗೋಸಾಗಾಟ ಹಾಗೂ ಗೋಹತ್ಯೆ ವಿರುದ್ಧವೂ ವಿಶೇಷ ಕಾರ್ಯಾಚರಣೆ ನಡೆಸಬೇಕು” ಎಂದು ಒತ್ತಾಯಿಸಿದರು.
ಅಕ್ರಮ ಗೋಸಾಗಾಟ ಹಾಗೂ ಗೋಹತ್ಯೆ ತಡೆಯಲು ಕರಾವಳಿ ಭಾಗದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಿಗೆ ವಿಶ್ವ ಹಿಂದೂ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕಾರಿಣಿ ಸದಸ್ಯರಾದ ಕಟೀಲ್ ದಿನೇಶ್ ಪೈ , ಸಹಸಂಯೋಜಕ್ ಭುಜಂಗ ಕುಲಾಲ್ , ಜಿಲ್ಲಾ ಗೋರಕ್ಷಾ ಪ್ರಮುಖ್ ಹರೀಶ್ ಶೇಟ್ ಸಹಿತ ಮತ್ತಿತರರು ಉಪಸ್ಥಿತರಿದ್ದರು .