ಮಂಗಳೂರು: ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡಿರುವ ಆರೋಪದಡಿ ಎಸ್‌ಡಿಪಿಐ ಮುಖಂಡನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಈ ಕುರಿತು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಂಟ್ವಾಳ ತಾಲೂಕಿನ ಗೂಡಿನ ಬಳಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಮುಖಂಡನೊಬ್ಬ ಪ್ರಚೋದನಾತ್ಮಕ ಭಾಷಣ ಮಾಡಿರುವುದಾಗಿ ಆರೋಪಿಸಿದರು.
“ಗೋಮಾಂಸ ತಿನ್ನುವುದು ನಮ್ಮ ಹಕ್ಕು” ಎಂದು ಭಾಷಣದಲ್ಲಿ ಹೇಳಿರುವುದಲ್ಲದೆ, “ಇದನ್ನು ಪ್ರಶ್ನಿಸಲು ಯಾರಾದರೂ ಬಂದರೆ ಕೈಕಟ್ಟಿ ಕುಳಿತುಕೊಳ್ಳಬೇಡಿ, ನಿಮ್ಮದೇ ರೀತಿಯಲ್ಲಿ ಉತ್ತರ ನೀಡಿ” ಎಂದು ಹೇಳುವ ಮೂಲಕ ಸಂಘರ್ಷಕ್ಕೆ ಪ್ರಚೋದನೆ ನೀಡಲಾಗಿದೆ ಎಂದು ಅವರು ದೂರಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, ಕಾನೂನನ್ನು ಮೀರಿ ನಡೆದುಕೊಳ್ಳುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುವುದು ಕಾನೂನು ವಿರೋಧಿ ಎಂದು ಶರಣ್ ಪಂಪ್ವೆಲ್ ಅಭಿಪ್ರಾಯಪಟ್ಟರು.
“ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿರುವ ಸಂದರ್ಭದಲ್ಲಿ ಅದನ್ನು ಉಲ್ಲಂಘಿಸಿ ನಾವು ತಿನ್ನುತ್ತೇವೆ ಎಂದು ಹೇಳಿದರೆ, ಅದನ್ನು ಕಾನೂನಾತ್ಮಕವಾಗಿ ತಡೆಯುವ ಹಕ್ಕು ನಮಗಿದೆ” ಎಂದು ಅವರು ಹೇಳಿದರು.
ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಪ್ರಚೋದನಾತ್ಮಕ ಹೇಳಿಕೆ ನೀಡಿರುವ ಎಸ್‌ಡಿಪಿಐ ಮುಖಂಡನ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕಾರಿಣಿ ಸದಸ್ಯರಾದ ಕಟೀಲ್ ದಿನೇಶ್ ಪೈ , ಸಹಸಂಯೋಜಕ್ ಭುಜಂಗ ಕುಲಾಲ್ , ಜಿಲ್ಲಾ ಗೋರಕ್ಷಾ ಪ್ರಮುಖ್ ಹರೀಶ್ ಶೇಟ್ ಸಹಿತ ಮತ್ತಿತರರು ಉಪಸ್ಥಿತರಿದ್ದರು .