ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷದ ಸಾಧನಾ ಸಮಾವೇಶ ನಡೆಸುತ್ತಿರುವ ಹಿನ್ನೆಲೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಕುರಿತು ಸಂಸದ ಕ್ಯಾ ಬ್ರಿಜೇಶ್ ಚೌಟ ತೀವ್ರ ಟೀಕೆ ವ್ಯಕ್ತಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಆದಾಯ ಮಿಗಿತ (Revenue Surplus) ಹೊಂದಿದ್ದ ಕರ್ನಾಟಕ ಇಂದು ಆದಾಯ ಕೊರತೆ (Revenue Deficit) ರಾಜ್ಯವಾಗಿ ಪರಿಣಮಿಸಿದೆ ಎಂದು ಆರೋಪಿಸಿದರು.
“ದೇಶದಲ್ಲೇ ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಿದ್ದ ರಾಜ್ಯ ಕರ್ನಾಟಕ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತ ಅವಧಿಯಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ” ಎಂದು ಅವರು ಹೇಳಿದರು.
2023-24ನೇ ಹಣಕಾಸು ವರ್ಷದಲ್ಲಿ ರಾಜ್ಯದ ಆದಾಯ ಕೇವಲ 1.8 ಶೇಕಡ ಏರಿಕೆಯಾಗಿದ್ದರೆ, ವೆಚ್ಚವು 12.5 ಶೇಕಡ ಹೆಚ್ಚಳ ಕಂಡಿದೆ ಎಂದು ಅವರು ತಿಳಿಸಿದರು. ರಾಜ್ಯದ ರೆವೆನ್ಯೂ ಡೆಫಿಸಿಟ್ ₹9,271 ಕೋಟಿಗೆ ತಲುಪಿದ್ದು, ಫಿಸ್ಕಲ್ ಡೆಫಿಸಿಟ್ ಕಳೆದ ವರ್ಷದ ₹46,623 ಕೋಟಿಯಿಂದ ₹65,522 ಕೋಟಿಗೆ ಏರಿಕೆಯಾಗಿದೆ ಎಂದು ಆರೋಪಿಸಿದರು.
ಇದಲ್ಲದೆ, ಸರ್ಕಾರದ ಸಾಲ ಮತ್ತು ಬಾರೋಯಿಂಗ್ಸ್ ₹26 ಸಾವಿರ ಕೋಟಿಯಿಂದ ₹63 ಸಾವಿರ ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದ ಅವರು, “ಸಾಮಾನ್ಯವಾಗಿ ಸರ್ಕಾರಗಳು ಆಸ್ತಿ ನಿರ್ಮಾಣಕ್ಕಾಗಿ ಸಾಲ ಮಾಡುತ್ತವೆ. ಆದರೆ ಈ ಸರ್ಕಾರ ಯಾವುದೇ ಆಸ್ತಿ ನಿರ್ಮಾಣ ಮಾಡದೇ ಸಾಲದ ಮೊತ್ತವನ್ನು ಹೆಚ್ಚಿಸುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ” ಎಂದು ಟೀಕಿಸಿದರು.
ರಾಜ್ಯದ ಮೂಲಸೌಕರ್ಯ ವೆಚ್ಚವನ್ನು ₹5 ಸಾವಿರ ಕೋಟಿ ಕಡಿತಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, “ಬಾರೋಯಿಂಗ್ಸ್ ಹೆಚ್ಚಿಸುತ್ತಾ ಇನ್ಫ್ರಾಸ್ಟ್ರಕ್ಚರ್ ವೆಚ್ಚ ಕಡಿತ ಮಾಡಲಾಗುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅನೇಕ ಮೂಲಸೌಕರ್ಯ ಯೋಜನೆಗಳಲ್ಲಿ 68 ಶೇಕಡಾ ಯೋಜನೆಗಳು ಅಪೂರ್ಣವಾಗಿವೆ” ಎಂದರು.
ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ನಗರ ಭಾಗದಲ್ಲಿ ಕರ್ನಾಟಕಕ್ಕೆ ಮಂಜೂರಾದ 6.38 ಲಕ್ಷ ಮನೆಗಳಲ್ಲಿ ಕೇವಲ 3.86 ಲಕ್ಷ ಮನೆಗಳು ಮಾತ್ರ ಪೂರ್ಣಗೊಂಡಿದ್ದು, ಉಳಿದ ಮನೆಗಳು ಇನ್ನೂ ಅಪೂರ್ಣವಾಗಿವೆ ಎಂದು ಹೇಳಿದರು.
“ಕೇಂದ್ರ ಸರ್ಕಾರದ ಯೋಜನೆಗಳಿಗೆ ರಾಜ್ಯ ತನ್ನ ಪಾಲಿನ ಹಣ ಬಿಡುಗಡೆ ಮಾಡುತ್ತಿಲ್ಲ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಕ್ರೆಡಿಟ್ ಹೋಗಬಾರದು ಎಂಬ ಕಾರಣಕ್ಕೆ ಯೋಜನೆಗಳ ಅನುಷ್ಠಾನದಲ್ಲಿ ತಾತ್ಸಾರ ತೋರಲಾಗುತ್ತಿದೆ” ಎಂದು ಅವರು ಆರೋಪಿಸಿದರು.
ಇದೇ ವೇಳೆ ಕ್ಷೀರಧಾರೆ ಯೋಜನೆ ಕುರಿತೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ರಾಜ್ಯದ 38 ಲಕ್ಷ ಹೈನುಗಾರರಿಗೆ ಸರ್ಕಾರ ಅನ್ಯಾಯ ಮಾಡಿದೆ. ಕಳೆದ ಒಂಬತ್ತು ತಿಂಗಳಿಂದ ₹800 ಕೋಟಿ ಸಬ್ಸಿಡಿ ಹಣ ಬಿಡುಗಡೆಯಾಗಿಲ್ಲ. ಪ್ರತಿ ತಿಂಗಳು ₹110 ಕೋಟಿ ನೀಡಬೇಕಾದ ಹಣವನ್ನು ಸರ್ಕಾರ ನೀಡುತ್ತಿಲ್ಲ” ಎಂದು ದೂರಿದರು.
“ಹೈನುಗಾರಿಕೆ ನಡೆಸುತ್ತಿರುವ ಮಹಿಳೆಯರನ್ನು ಕೇಳಿದರೆ ಕ್ಷೀರಧಾರೆ ಹಣ ಬಂದಿಲ್ಲ ಎಂಬುದು ಗೊತ್ತಾಗುತ್ತದೆ. ಬಡವರ ಬದುಕಿನ ಮೇಲೆ ಸರ್ಕಾರ ಹೊಡೆತ ನೀಡುತ್ತಿದೆ” ಎಂದು ಅವರು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಂಜಯ್ ಪ್ರಭು, ಪ್ರಸಾದ್, ಡಾ. ಮಂಜುಳಾ ರಾವ್, ಸುಜಿತ್ ಪ್ರತಾಪ್, ಅರುಣ್ ಶೆಟ್ಟಿ, ರಾಜ್ ಗೋಪಾಲ್ ರೈ, ಜೀವನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.