ಕೋಕ್ ಸಲ್ಪರ್ ಮಾಲಿನ್ಯ ವಿರುದ್ಧ ಜೋಕಟ್ಟೆ ಗ್ರಾಮಸ್ಥರ ಹೋರಾಟ ಮೂರನೇ ದಿನಕ್ಕೆ

ಮಂಗಳೂರು: ಎಂಆರ್‌ಪಿಎಲ್‌ನ ಕೋಕ್ ಸಲ್ಪರ್ ಘಟಕದಿಂದ ಉಂಟಾಗುತ್ತಿರುವ ಗಂಭೀರ ಮಾಲಿನ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು, ಜನವಸತಿ ಪ್ರದೇಶದಲ್ಲಿ ಹಸಿರು ವಲಯ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಸಂತ್ರಸ್ತರಿಗೆ ಪುನರ್ವಸತಿ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜೋಕಟ್ಟೆ, ಕೆಂಜಾರು ಮತ್ತು ಕಳವಾರು ಗ್ರಾಮದ ನಿವಾಸಿಗಳು ನಡೆಸುತ್ತಿರುವ ಹಗಲು-ರಾತ್ರಿ ಧರಣಿ ಮೂರನೇ ದಿನಕ್ಕೂ ಮುಂದುವರಿಯಿತು.

ಎಂಆರ್‌ಪಿಎಲ್ ಕೋಕ್ ಸಲ್ಪರ್ ಘಟಕದ ಮುಂಭಾಗ ನಡೆಯುತ್ತಿರುವ ಧರಣಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್ ಭಾಗವಹಿಸಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು.

ಈ ವೇಳೆ ಮಾತನಾಡಿದ ಅವರು, 2016ರಲ್ಲಿ ತಾನು ಸಚಿವನಾಗಿದ್ದ ಸಂದರ್ಭದಲ್ಲಿ ಜೋಕಟ್ಟೆ ಭಾಗದ ಜನವಸತಿ ಪ್ರದೇಶದಲ್ಲಿ ಕೋಕ್ ಸಲ್ಪರ್ ಮಾಲಿನ್ಯದಿಂದ ಉಂಟಾಗಿದ್ದ ಗಂಭೀರ ಪರಿಸ್ಥಿತಿಯನ್ನು ಮನಗಂಡು ಸರ್ಕಾರ ವಿಶೇಷ ಮುತುವರ್ಜಿ ವಹಿಸಿತ್ತು. ತಜ್ಞರ ಸಮಿತಿ ರಚಿಸಿ ಪರಿಹಾರೋಪಾಯಗಳ ಕುರಿತು ಆದೇಶ ಹೊರಡಿಸಲಾಗಿತ್ತು. ಆದರೆ ಆದೇಶ ಹೊರಬಂದ ಬಳಿಕ ದಶಕ ಕಳೆದರೂ ಎಂಆರ್‌ಪಿಎಲ್ ಹಸಿರು ವಲಯ ನಿರ್ಮಾಣ ಹಾಗೂ ಸಂತ್ರಸ್ತರ ಪುನರ್ವಸತಿ ವಿಚಾರದಲ್ಲಿ ನೆಪಗಳನ್ನು ಮುಂದಿಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಹಾಗೂ ಕಂಪೆನಿ ನೀಡಿದ ಭರವಸೆಯಂತೆ ನೇರವಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು. ಗ್ರಾಮಸ್ಥರ ಬದುಕಿನೊಂದಿಗೆ ಚೆಲ್ಲಾಟ ಆಡುವುದನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಸಿದರು. ಈ ಕುರಿತು ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಧರಣಿಯಲ್ಲಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಬಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆದಂ ಕಳವಾರು, ಜೋಕಟ್ಟೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮರ್ ಫಾರೂಕ್, ಕುಂಭಾರ ಯುವ ವೇದಿಕೆಯ ಅಧ್ಯಕ್ಷ ಗಂಗಾಧರ ಬಂಜನ್, ಸಿಪಿಐಎಂ ಮುಖಂಡ ಶ್ರೀನಾಥ್ ಕುಲಾಲ್, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಕಿರಣ ಪ್ರಭ, ಕಾರ್ಯದರ್ಶಿ ಪ್ರಮೀಳಾ ಕೆ., ಸಿಲ್ವಿಯಾ ಜೋಕಟ್ಟೆ, ಪುಷ್ಪಾ ಡಿ., ಅಬೂಬಕ್ಕರ್ ಬಾವ, ಜಾಬಿರ್ ಜೆ.ಎಂ., ಇಕ್ಬಾಲ್ ಜೋಕಟ್ಟೆ, ಹಸೈನಾರ್, ಸೀತಾರಾಮ ಆಚಾರ್ಯ, ಮನೋಜ್ ಜೋಕಟ್ಟೆ, ಮೋಹನ್ ಕುಲಾಲ್ ಜೋಕಟ್ಟೆ, ಗಣೇಶ್ ನಿರ್ಮುಂಜೆ, ಶೆರೀಫ್ ನಿರ್ಮುಂಜೆ, ಹನೀಫ್ ಜೋಕಟ್ಟೆ ಸೇರಿದಂತೆ ಹಲವರು ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!