ಮಂಜೇಶ್ವರ: ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಮಂಜೇಶ್ವರದ ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಚಿತ್ರಣವೀಗ ಬದಲಾಗಿದೆ. ಆದರೆ ಈ ಬದಲಾವಣೆ ಇಂಟರ್ ಲಾಕ್ ರಸ್ತೆಯ ಸೌಂದರ್ಯಕ್ಕಲ್ಲ, ಬದಲಾಗಿ ಅಲ್ಲಿ ರಾಶಿ ಬಿದ್ದಿರುವ ದುರ್ನಾತ ಬೀರುತ್ತಿರುವ ತ್ಯಾಜ್ಯಕ್ಕೆ ಎಂಬಂತಾಗಿದೆ.
ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯ ಪಟಾಕಿ ಅಂಗಡಿ ಸಮೀಪದ ಸರ್ವೀಸ್ ರಸ್ತೆಯ ಪಕ್ಕದಲ್ಲೇ ಸಾರ್ವಜನಿಕರ ಅನುಕೂಲಕ್ಕಾಗಿ ಇತ್ತೀಚೆಗಷ್ಟೇ ಇಂಟರ್ ಲಾಕ್ ಅಳವಡಿಸಿ ಕಾಲ್ನಡೆ ರಸ್ತೆಯನ್ನು ಸುಸಜ್ಜಿತಗೊಳಿಸಲಾಗಿತ್ತು. ಆರಂಭದಲ್ಲಿ ಇಲ್ಲಿ ಕಸ ಹಾಕದಂತೆ ಪಂಚಾಯತ್ ಅಧಿಕಾರಿಗಳು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ, ಇಡೀ ಪ್ರದೇಶವನ್ನು ಸ್ವಚ್ಛಗೊಳಿಸಿದ್ದರು. ಆದರೆ, ಅಧಿಕಾರಿಗಳ ಎಚ್ಚರಿಕೆ ಮತ್ತು ನಾಗರಿಕ ಪ್ರಜ್ಞೆ ಎರಡೂ ಈಗ ಮಣ್ಣುಪಾಲಾಗಿದೆ.
ಸಾರ್ವಜನಿಕರು ನಡೆದಾಡಲು ನಿರ್ಮಿಸಿದ ಕಾಲ್ನಡೆ ಹಾದಿಯಲ್ಲೇ ಈಗ ಪ್ಲಾಸ್ಟಿಕ್ ಹಾಗೂ ಹಸಿ ಕಸದ ರಾಶಿ ಬಿದ್ದಿದೆ. ಈ ತ್ಯಾಜ್ಯವನ್ನು ಬೀದಿ ನಾಯಿಗಳು ರಸ್ತೆಯಾದ್ಯಂತ ಎಳೆದಾಡಿ ಚೆಲ್ಲಾಪಿಲ್ಲಿಗೊಳಿಸಿವೆ.
ಕಳೆದ ರಾತ್ರಿ ಸುರಿದ ಮಳೆಗೆ ಕಸವೆಲ್ಲಾ ನೆನೆದು ಕೊಳೆತು ನಾರುತ್ತಿದ್ದು, ಹಾದಿಹೋಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ಥಳೀಯರ ಆರೋಪದಂತೆ, ಈ ರಸ್ತೆಯ ಸುತ್ತಮುತ್ತಲಿರುವ ಪ್ಲಾಟ್ ಹಾಗೂ ಅಪಾರ್ಟ್ಮೆಂಟ್‍ಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಈ ರಾದ್ಧಾಂತಕ್ಕೆ ಮುಖ್ಯ ಕಾರಣ. ಅಲ್ಲಿನ ನಿವಾಸಿಗಳು ತಡರಾತ್ರಿ ಅಥವಾ ಮುಂಜಾನೆ ಹೊತ್ತಿನಲ್ಲಿ ಯಾರಿಗೂ ತಿಳಿಯದಂತೆ ರಸ್ತೆ ಬದಿಗೆ ಕಸ ಎಸೆದು ಹೋಗುತ್ತಿದ್ದಾರೆ ಎಂಬ ಗಂಭೀರ ದೂರು ಕೇಳಿಬಂದಿದೆ.
”ಸ್ವಚ್ಛವಾಗಿದ್ದ ರಸ್ತೆಯನ್ನು ಮತ್ತೆ ನರಕ ಸದೃಶವನ್ನಾಗಿ ಮಾಡಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದು, ಈ ತ್ಯಾಜ್ಯದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.” ಎಂದು ಸ್ಥಳೀಯರು ಹೇಳುತಿದ್ದಾರೆ.
ಮಳೆಗಾಲದ ಆರಂಭದಲ್ಲೇ ಈ ರೀತಿ ತ್ಯಾಜ್ಯ ಸಂಗ್ರಹವಾಗುತ್ತಿರುವುದು ಕಾಲರಾ, ಡೆಂಗ್ಯೂವಿನಂತಹ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಿದೆ. ಪಂಚಾಯತ್ ಆಡಳಿತ ಕೇವಲ ಎಚ್ಚರಿಕೆ ನೀಡಿ ಸುಮ್ಮನಾಗದೆ, ಸಿಸಿಟಿವಿ ಅಳವಡಿಕೆ ಅಥವಾ ದಂಡ ವಿಧಿಸುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳವನ್ನು ಕಸದ ತೊಟ್ಟಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವರೇ ಇದು ಇಲ್ಲಿಯ ಸ್ಥಳೀಯರ ಪ್ರಶ್ನೆ.