ಸಹ್ಯಾದ್ರಿ ಕಾಲೇಜಿನಲ್ಲಿ ಎಐ-ರೊಬೊಟಿಕ್ಸ್ ಲ್ಯಾಬ್ ಹಾಗೂ ಸಮಗ್ರ ಕೈಗಾರಿಕಾ ಕಾರ್ಯಕ್ಷೇತ್ರ ಉದ್ಘಾಟನೆ

ಮಂಗಳೂರು: ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಫಸಿಸ್ ಫೌಂಡೇಶನ್ ಸಹಯೋಗದೊಂದಿಗೆ ಮೇ 22ರಂದು “ಎಂಫಸಿಸ್ ಎಐ ಮತ್ತು ರೊಬೊಟಿಕ್ಸ್ ಲ್ಯಾಬ್” ಹಾಗೂ ಮೇ 23ರಂದು “ಸಮಗ್ರ ಕೈಗಾರಿಕಾ ಕಾರ್ಯಕ್ಷೇತ್ರ” ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾಲೇಜಿನ ಪ್ರಾಂಶುಪಾಲ ಎಸ್‌.ಎಸ್‌. ಇಂಜನಗೇರಿ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ 22ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಎಂಫಸಿಸ್ ಎಐ ಮತ್ತು ರೊಬೊಟಿಕ್ಸ್ ಲ್ಯಾಬ್ ಉದ್ಘಾಟನೆಯನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಎಸ್. ವಿದ್ಯಾಶಂಕರ್, ಸ್ಪಾರ್ಕಲ್ ಇನ್ನೋವೇಶನ್ ಇಕೋಸಿಸ್ಟಮ್ ಮತ್ತು ಕಮ್ಯುನಿಕೇಷನ್ಸ್‌ನ ಹಿರಿಯ ಉಪಾಧ್ಯಕ್ಷೆ ದೀಪಾ ನಾಗರಾಜ್, ಎಂಫಸಿಸ್ ಫೌಂಡೇಶನ್‌ನ ಸಿಎಸ್‌ಆರ್ ಮುಖ್ಯಸ್ಥ ಸುಮಿತ್ ಚೌಹಾನ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್‌ನ ಉಪಾಧ್ಯಕ್ಷ ಚೇತನ್ ದೀಕ್ಷಿತ್ ಹಾಗೂ ನ್ಯಾಸ್ಕಾಮ್ ಪ್ರಾದೇಶಿಕ ನಿರ್ದೇಶಕ ಭಾಸ್ಕರ ಭಾಗವಹಿಸಲಿದ್ದಾರೆ ಎಂದರು.

ಈ ಲ್ಯಾಬ್ ಅನ್ನು ಸಹ್ಯಾದ್ರಿ ಹಬ್ ಫಾರ್ ಇನ್ನೋವೇಶನ್ ಆಂಡ್ ಎಂಟರ್‌ಪ್ರಿನ್ಯೂರ್‌ಶಿಪ್ ಫೌಂಡೇಶನ್ (ಶೈನ್ ಫೌಂಡೇಶನ್), ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ನ್ಯಾಸ್ಕಾಮ್ ಸಹಯೋಗದೊಂದಿಗೆ ಎಂಫಸಿಸ್ ಫೌಂಡೇಶನ್‌ನ ಸಿಎಸ್‌ಆರ್ ಉಪಕ್ರಮದ ಭಾಗವಾಗಿ ಸ್ಥಾಪಿಸಲಾಗಿದೆ. ಉದ್ಯಮ ಸಿದ್ಧ ಪ್ರತಿಭೆ, ನವೀನ ಸ್ಟಾರ್ಟ್‌ಅಪ್‌ಗಳು ಹಾಗೂ ಪ್ರಾದೇಶಿಕ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ನಾಲ್ಕು ವರ್ಷಗಳ ಅವಧಿಗೆ 2 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

ಮೇ 23ರಂದು ಬೆಳಗ್ಗೆ 10 ಗಂಟೆಗೆ ನಡೆಯುವ ಸಮಗ್ರ ಕೈಗಾರಿಕಾ ಕಾರ್ಯಕ್ಷೇತ್ರ ಉದ್ಘಾಟನಾ ಸಮಾರಂಭವನ್ನು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಉದ್ಘಾಟಿಸಲಿದ್ದಾರೆ. ಅಲ್ ಕಾರ್ಗೊ ಲಾಜಿಸ್ಟಿಕ್ಸ್ ಸಂಸ್ಥಾಪಕ ಹಾಗೂ ಅಧ್ಯಕ್ಷ ಶಶಿಕಿರಣ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಈ ಕಾರ್ಯಕ್ಷೇತ್ರದ ಮೂಲಕ ವಿದ್ಯಾರ್ಥಿಗಳು ಉದ್ಯಮ ತಜ್ಞರೊಂದಿಗೆ ನೇರ ಸಂಪರ್ಕ ಸಾಧಿಸಿ ಲೈವ್ ಪ್ರಾಜೆಕ್ಟ್‌ಗಳಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೆ ಇಂಟರ್ನ್‌ಶಿಪ್ ಹಾಗೂ ಫ್ರೀಲ್ಯಾನ್ಸಿಂಗ್ ಯೋಜನೆಗಳಲ್ಲಿ ಭಾಗವಹಿಸಲು ಅವಕಾಶ ಸಿಗಲಿದೆ ಎಂದರು.

ಪ್ರಸ್ತುತ 100 ಆಸನ ಸಾಮರ್ಥ್ಯ ಹೊಂದಿರುವ ಕಾರ್ಯಕ್ಷೇತ್ರವನ್ನು 300 ಆಸನಗಳಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಈಗ ನಾಲ್ಕು ಕಂಪೆನಿಗಳು ಕೈಜೋಡಿಸಿರುವ ಈ ಯೋಜನೆಯಲ್ಲಿ ಮುಂದಿನ ಒಂದು ವರ್ಷದೊಳಗೆ 25 ಕಂಪೆನಿಗಳನ್ನು ಒಳಗೊಳ್ಳುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಿಇಒ ಜಾನ್ಸನ್ ಟೆಲ್ಸಿಸ್, ಪ್ರಮುಖರಾದ ರಾಮಕೃಷ್ಣ ದೇವಾನಂದ, ಮಾನಸಾ ಶೆಟ್ಟಿ, ಡಾ. ಸುಧೀ‌ರ್ ಶೆಟ್ಟಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!