ಮಂಗಳೂರು: ಜಾಗತಿಕ ಯುದ್ಧ ಭೀತಿ, ಮಾನವೀಯ ಮೌಲ್ಯಗಳ ಕುಸಿತ ಹಾಗೂ ಪರಿಸರ ಹಾನಿಯ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ಮೇ 23ರಂದು ಮಂಗಳೂರಿನ ಹಂಪನಕಟ್ಟೆಯ ಕ್ಲಾಕ್ ಟವರ್ ಎದುರು ಮೌನ ಧರಣಿ ನಡೆಸಲಾಗುವುದು ನನ್ನ ಜೊತೆ ಒಂದು ಮಗು ಕೂಡ
“ನಮಗೂ ಬದುಕಲು ಅವಕಾಶ ಕೊಡಿ” ಎಂಬ ಸಂದೇಶದೊಂದಿಗೆ ಧರಣಿಯಲ್ಲಿ ಭಾಗವಹಿಸಲಿದೆ ಆಸಕ್ತರು ಧರಣಿಯಲ್ಲಿ ಭಾಗಿಯಾಗಬಹುದೆಂದು ನಮ್ಮ ಭೂಮಿ ಕುಂದಾಪುರ ಸಂಸ್ಥೆಯ ಪ್ರಮುಖರಾದ ರಾಮಾಂಜಿ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಳೆದ ಕೆಲವು ತಿಂಗಳುಗಳಿಂದ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧಗಳಿಂದ ಮಾನವೀಯ ಸಂಬಂಧಗಳಲ್ಲಿ ಬಿರುಕು ಮೂಡಿದ್ದು, ರಕ್ತಸಿಂಚನ ಮತ್ತು ಹಿಂಸಾಚಾರ ಹೆಚ್ಚಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
“ಭೂಮಿಯ ಮೇಲೆ ಶಾಂತಿ ನೆಲೆಸಬೇಕು. ಮಾನವೀಯ ಸಂಬಂಧಗಳು ಉಳಿಯಬೇಕು. ಪ್ರಕೃತಿ ಸಂಪನ್ಮೂಲಗಳ ಸಂರಕ್ಷಣೆ ಆಗಬೇಕು. ಮಕ್ಕಳ ಭವಿಷ್ಯಕ್ಕೆ ಸುರಕ್ಷಿತ ಮತ್ತು ಉತ್ತಮ ವಾತಾವರಣ ಕಲ್ಪಿಸಬೇಕು ಎಂಬುದು ನನ್ನ ಮುಖ್ಯ ಉದ್ದೇಶ” ಎಂದು ಹೇಳಿದರು.
ಈ ನಿಟ್ಟಿನಲ್ಲಿ ಕಳೆದ ಏಪ್ರಿಲ್ 11ರಂದು ಉಡುಪಿಯ ಕ್ಲಾಕ್ ಟವರ್ ಬಳಿ ಮಹಾತ್ಮ ಗಾಂಧಿ ಪ್ರತಿಮೆ ಎದುರು ರಾಜ್ಯಮಟ್ಟದ ಶಾಂತಿ ಅಭಿಯಾನ ಆರಂಭಿಸಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಕುಂದಾಪುರದಲ್ಲಿಯೂ ಚಳುವಳಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಅಂದು ಪುರಭವನದ ಎದುರು ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ಪ್ರತಿಮೆಗಳಿಗೆ ಮಾಲಾರ್ಪಣೆ ಸಲ್ಲಿಸಿ ಪ್ರತಿಭಟನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಈ ಶಾಂತಿ ಚಳುವಳಿಗೆ ಬೆಂಬಲ ನೀಡಬೇಕು ಎಂದು ಅವರು ಮನವಿ ಮಾಡಿದರು.