ಕೊಟ್ಟಿಯೂರು ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ: ಮೇ 30ರಿಂದ ಭಕ್ತರಿಗೆ ದೇವರ ದರ್ಶನ ಆರಂಭ

ಕಣ್ಣೂರು: ದಕ್ಷಿಣ ಕಾಶಿ ಖ್ಯಾತಿಯ ಕೊಟ್ಟಿಯೂರು ಶಿವ ದೇವಾಲಯ ವೈಶಾಖ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಕ್ತರಿಗೆ ದೇವರ ದರ್ಶನ ಮೇ 30ರಿಂದ ಆರಂಭವಾಗಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಕೊಟ್ಟಿಯೂರಿನಲ್ಲಿ ದೇವರ ದರ್ಶನ ಈಗಾಗಲೇ ಆರಂಭವಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸಿದ್ದರು. ಆದರೆ ದರ್ಶನಕ್ಕೆ ಅವಕಾಶ ಇರದ ಕಾರಣ ಹಲವರು ನಿರಾಶರಾಗಿ ಹಿಂದಿರುಗಬೇಕಾದ ಪರಿಸ್ಥಿತಿ ಎದುರಾಯಿತು.

ಈ ಹಿನ್ನೆಲೆಯಲ್ಲಿ ದೇವಸ್ಥಾನ ಸಂಬಂಧಪಟ್ಟವರು ಸ್ಪಷ್ಟನೆ ನೀಡಿದ್ದು, ಈ ವರ್ಷದ ವೈಶಾಖ ಮಹೋತ್ಸವದ ಅಂಗವಾಗಿ ಮೇ 30ರ ಮಧ್ಯರಾತ್ರಿಯಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಮಹಿಳೆಯರಿಗೆ ಜೂನ್ 20ರ ಮಧ್ಯಾಹ್ನದವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದ್ದು, ಜೂನ್ 24ರಂದು ಈ ವರ್ಷದ ಕೊನೆಯ ಪೂಜೆ ನೆರವೇರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಪುರಾಣ ಪ್ರಸಿದ್ಧ ದಕ್ಷ ಯಾಗದ ನೆನಪನ್ನು ಹೊತ್ತ ಪ್ರಕೃತಿ ರಮಣೀಯ ಕ್ಷೇತ್ರವಾದ ಕೊಟ್ಟಿಯೂರಿಗೆ ಪ್ರತಿವರ್ಷ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಕಳೆದ ವರ್ಷದ ವೈಶಾಖೋತ್ಸವದ ಸಂದರ್ಭದಲ್ಲೂ ಭಾರೀ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದರು.

ಈ ಬಾರಿ ಹೆಚ್ಚಿನ ಭಕ್ತರು ಆಗಮಿಸುವ ಸಾಧ್ಯತೆ ಇರುವುದರಿಂದ ಭದ್ರತೆ, ವಾಹನ ಸಂಚಾರ ಹಾಗೂ ಭಕ್ತರ ವ್ಯವಸ್ಥಾಪನೆ ಕುರಿತಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!