ಮಂಗಳೂರು ಮಹಾನಗರ ಪಾಲಿಕೆಯ 59ನೇ ಜೆಪ್ಪು ವಾರ್ಡಿನ ಸೂಟರ್‌ಪೇಟೆ 4ನೇ ಅಡ್ಡರಸ್ತೆ ಮತ್ತು ಕನಕರಬೆಟ್ಟು ಬಳಿ ತಡೆಗೋಡೆ ಕುಸಿದ ಭಾಗಕ್ಕೆ 20ಲಕ್ಷ ರೂ. ಅನುದಾನದಲ್ಲಿ ಪುನರ್ ನಿರ್ಮಾಣ ಕಾಮಗಾರಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.
ನಂತರ ಮಾತನಾಡಿದ ಶಾಸಕರು, ಕಳೆದ ಮಳೆಗಾಲದಲ್ಲಿ ಈ ಭಾಗದ ಕೆಲವು ರಾಜಕಾಲುವೆಗಳಿಗೆ ಹಾನಿಯಾಗಿದ್ದರೆ, ಉಳಿದ ರಾಜಕಾಲುವೆಗಳು ಕೆಳ ಹಂತದಲ್ಲಿರುವುದು ಸಮಸ್ಯೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಸುಮಾರು 300 ರಿಂದ 400 ಕೋಟಿಗೂ ಹೆಚ್ಚು ಹಾನಿಯಾಗಿದ್ದರೂ ಅಗತ್ಯ ಪ್ರಮಾಣದ ಪರಿಹಾರ ರಾಜ್ಯ ಸರ್ಕಾರದಿಂದ ಬಂದಿಲ್ಲದಿರುವುದು ಬೇಸರದ ಸಂಗತಿ. ಇತ್ತೀಚಿಗೆ ರಾಜ್ಯ ಸರ್ಕಾರದಿಂದ ಹಲವು ಜಿಲ್ಲೆಗಳಿಗೆ ಮಳೆ ಪರಿಹಾರ ನಿಧಿ ಬಿಡುಗಡೆಯಾಗಿದ್ದು ಅದರಲ್ಲಿ ನಮ್ಮ ಪಾಲಿಕೆ ವ್ಯಾಪ್ತಿಗೆ “ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕರ ಹೆಸರಿನಲ್ಲಿ 10 ಕೋಟಿ ನೀಡಲಾಗಿದೆ. ಅದರಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯ ನಿಕಟಪೂರ್ವ ಪಾಲಿಕೆ ಸದಸ್ಯರಾದ ಭರತ್ ಕುಮಾರ್, ಅಜಿತ್ ಡಿಸಿಲ್ವ, ಶಬರೀಶ್, ಪ್ರವೀಣ್ ನಿಡ್ಡೆಲ್, ಹರೀಶ್, ಸೇರಿದಂತೆ ಜಪ್ಪು ವಾರ್ಡಿನ ಬಿಜೆಪಿ ಕಾರ್ಯಕರ್ತರು, ಸೂಟರ್‌ಪೇಟೆ ಪರಿಸರದ ನಿವಾಸಿಗಳು ಉಪಸ್ಥಿತರಿದ್ದರು