ಮಂಗಳೂರು: ಸಂಡೇ ಬಜಾರ್ (ಭಾನುವಾರದ ಮಾರುಕಟ್ಟೆ) ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಈ ಭಾನುವಾರ ನಿಗದಿಯಂತೆ ಸಂಡೇ ಬಜಾರ್ ನಡೆಯಲಿದ್ದು, ಅದನ್ನು ತಡೆಯಲು ಸಾಧ್ಯವಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಮುಖಂಡ ಸುನಿಲ್ ಕುಮಾರ್ ಬಜಾಲ್ ಮಂಗಳೂರು ಮಹಾನಗರ ಪಾಲಿಕೆಗೆ ಸವಾಲು ಹಾಕಿದರು.
ನಗರ ಪಾಲಿಕೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಬೇಕು. ಒಂದು ವೇಳೆ ಸಂಡೇ ಬಜಾರ್ಗೆ ಅವಕಾಶ ನೀಡಲು ಸಾಧ್ಯವಾಗದಿದ್ದರೆ ಪಾಲಿಕೆಯೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮನಪಾ ಕಚೇರಿ ಎದುರು 24 ಗಂಟೆಗಳಿಗೂ ಹೆಚ್ಚು ಕಾಲ ಹಗಲು-ರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರೂ ಮಹಾನಗರ ಪಾಲಿಕೆ ಆಯುಕ್ತರು ಮನವಿ ಸ್ವೀಕರಿಸಲು ಮುಂದಾಗಿಲ್ಲ. ಬಡ ಬೀದಿಬದಿ ವ್ಯಾಪಾರಿಗಳ ಸಮಸ್ಯೆ ಆಲಿಸಲು ಕೂಡ ಆಯುಕ್ತರು ಸಿದ್ಧರಿಲ್ಲ ಎಂದು ಆರೋಪಿಸಿದರು.


ಜಿಲ್ಲಾಧಿಕಾರಿಗಳು ಈ ಹಿಂದೆ ಸಕಾರಾತ್ಮಕ ಭರವಸೆ ನೀಡಿದ್ದು, ಅವರಿಗೆ ಅಥವಾ ಅವರ ಪರವಾಗಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲು ತಾವು ಸಿದ್ಧರಾಗಿದ್ದೇವೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಆಡಳಿತದ ಜವಾಬ್ದಾರಿಯಾಗಿದ್ದು, ಮನವಿ ಸ್ವೀಕರಿಸಲು ನಿರಾಕರಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದರು.
ಸಂಡೇ ಬಜಾರ್ಗೆ ಅನುಮತಿ ನೀಡದಿದ್ದರೂ ನಿಗದಿಯಂತೆ ಭಾನುವಾರ ಮಾರುಕಟ್ಟೆ ನಡೆಸಲಾಗುವುದು. ಯಾವುದೇ ಕ್ರಮ ಎದುರಿಸಲು ವ್ಯಾಪಾರಸ್ಥರು ಸಿದ್ಧರಾಗಿದ್ದಾರೆ ಎಂದು ಸುನಿಲ್ ಕುಮಾರ್ ಬಜಾಲ್ ಹೇಳಿದರು.
ಸಮಸ್ಯೆ ಭಾನುವಾರದೊಳಗೆ ಬಗೆಹರಿಯದಿದ್ದರೆ ಮುಂದಿನ ವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅಗತ್ಯವಿದ್ದರೆ ‘ಜೈಲ್ ಭರೋ’ ಚಳುವಳಿ ನಡೆಸಿ ಸ್ವಯಂಪ್ರೇರಿತವಾಗಿ ಬಂಧನಕ್ಕೂ ಒಳಗಾಗಲು ಸಿದ್ಧವಿದ್ದೇವೆ ಎಂದು ಸಂಘ ಎಚ್ಚರಿಕೆ ನೀಡಿದೆ.
ಕಳೆದ 24 ಗಂಟೆಗಳ ಧರಣಿಗೆ ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಬೀದಿಬದಿ ವ್ಯಾಪಾರಿಗಳ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು


