ಬದ್ರಿಯಾ ವೆಲ್ಫೇರ್ ಸೊಸೈಟಿಯ 40ನೇ ವರ್ಷಾಚರಣೆ ಸಮಾರೋಪ

ಮಾದಕ ವ್ಯಸನ ವಿರೋಧಿ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ

ಅಜ್ಜಿನಡ್ಕ: ಬದ್ರಿಯಾ ವೆಲ್ಫೇರ್ ಸೊಸೈಟಿ ಇದರ 40ನೇ ವರ್ಷದ ಸಮಾರೋಪ ಸಮಾರಂಭ ಹಾಗೂ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಕಾರ್ಯಕ್ರಮ ಭಾನುವಾರ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ವಿಜಯಕಾಂತಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮಾದಕ ವ್ಯಸನ ಹಾಗೂ ಇತರ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ದಾರಿ ತಪ್ಪುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಸಂಘ-ಸಂಸ್ಥೆಗಳು ಕ್ರೀಡೆ, ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಯುವಕರನ್ನು ಸತ್ಪ್ರಜೆಗಳಾಗಿ ರೂಪಿಸಲು ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಸಂಘಟನೆಯಲ್ಲಿ ಸೇವೆ ಸಲ್ಲಿಸಿದವರು ಹಾಗೂ ಊರಿನ ಹಿರಿಯರು ಸೇರಿ 40 ಮಂದಿಯನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಸೊಸೈಟಿಯ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ವಹಿಸಿದ್ದರು.

ಮುಖ್ಯ ಭಾಷಣವನ್ನು ಕೇರಳದ ನೀರೊಳಿಕೆ ಇರ್ಫಾನಿಯಾ ಐಎಫ್‌ಎಲ್ ಕಾಲೇಜಿನ ಪ್ರಾಂಶುಪಾಲ ಶೇಖ್ ಮಹಮ್ಮದ್ ಇರ್ಫಾನಿ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಸುಲೈಮಾನ್, ಬೈತುಲ್ಲಾ ಜುಮಾ ಮಸೀದಿಯ ಅಧ್ಯಕ್ಷ ಮೊಯಿದ್ದೀನ್ ಕುಂಞಿ ಉಚ್ಚಿಲ, ಹೈಕೋರ್ಟ್ ನ್ಯಾಯವಾದಿ ಮುಝಫ್ಫರ್ ಅಹ್ಮದ್, ಬೀಯಿಂಗ್ ಹ್ಯೂಮನ್ ಸಂಸ್ಥಾಪಕಾಧ್ಯಕ್ಷ ಆಸಿಫ್ ಡೀಲ್ಸ್, ಉಳ್ಳಾಲ ಠಾಣಾ ನಿರೀಕ್ಷಕ ವೀರೂಪಾಕ್ಷ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಬಾತಿಷ್ ಸ್ವಾಗತಿಸಿದರು. ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಅಹ್ಮದ್ ಬಾವ ಅಜ್ಜಿನಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷ ಹನೀಫ್ ಎಸ್.ಬಿ. ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!