ಫೋಟೋಗ್ರಾಫರ್ ಸಂಘದ ಸದಸ್ಯ ಗಣೇಶ್ ನಿಧನಕ್ಕೆ ಸಂತಾಪ
ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ ಕ್ರಾಸ್ ಬಳಿ ಭಾನುವಾರ ಸಂಭವಿಸಿದ ಕಾರು ಹಾಗೂ ಬೈಕ್ ನಡುವಿನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕಾಯರ್ತಡ್ಕ ನಿವಾಸಿ ಗಣೇಶ್ (36) ಮೃತರು. ಅವರು ಉಜಿರೆ ಕಡೆಯಿಂದ ಕಕ್ಕಿಂಜೆ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ಚಾರ್ಮಾಡಿ ಕಡೆಯಿಂದ ಬರುತ್ತಿದ್ದ ಕಾರಿನ ಬಲಭಾಗದ ಸೈಡ್ ಮಿರರ್ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಗಣೇಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಮೃತಪಟ್ಟರು.
ಅವಿವಾಹಿತರಾಗಿದ್ದ ಗಣೇಶ್ ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಮೃತ ಗಣೇಶ್ ಅವರು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಘಟಕದ ಬೆಳ್ತಂಗಡಿ ವಲಯದ ಸದಸ್ಯರಾಗಿದ್ದು, “ಗಣೇಶ್ ಸ್ಟುಡಿಯೋ” ನಡೆಸುತ್ತಿದ್ದರು. ಅವರ ನಿಧನಕ್ಕೆ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ ಸಂತಾಪ ಸೂಚಿಸಿದೆ.