ಮಂಗಳೂರು: ರಾಮನಗರ ಜಿಲ್ಲಾ ಮಾವು ತೋಟದ ಬೆಳೆಗಾರರ ಮಾರಾಟ ಸಂಘ (ರಿ) ವತಿಯಿಂದ “ರೈತರಿಂದ ಗ್ರಾಹಕರಿಗೆ ನೇರ ಮಾರಾಟ” ಶೀರ್ಷಿಕೆಯಡಿ ಮಾವು ಮೇಳವು ಮೇ 28ರಿಂದ 31ರವರೆಗೆ ನಗರದ ಕದ್ರಿ ಪಾರ್ಕ್ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ 25ಕ್ಕೂ ಅಧಿಕ ಬೆಳೆಗಾರರಿಗೆ ತಮ್ಮ ಮಾವು ಹಾಗೂ ಮಾವಿನ ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದರು.
ಮೇ 28ರಂದು ಪೂರ್ವಾಹ್ನ 11 ಗಂಟೆಗೆ ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷರಾದ ಯು.ಟಿ ಖಾದರ್ ಫರೀದ್ ಮೇಳವನ್ನು ಉದ್ಘಾಟಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಶಾಸಕರಾದ ವೇದವ್ಯಾಸ್ ಕಾಮತ್ ವಹಿಸಲಿದ್ದಾರೆ . ಮುಖ್ಯ ಅಥಿತಿಗಳಾಗಿ ಸಂಸದರಾದ ಕ್ಯಾ ಬ್ರಿಜೇಶ್ ಚೌಟ , ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ , ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಸಹಿತ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು .
ಮೇಳವು ಪ್ರತಿದಿನ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8.30ರವರೆಗೆ ಸಾರ್ವಜನಿಕರಿಗೆ ತೆರೆದಿರಲಿದೆ. ನೈಸರ್ಗಿಕವಾಗಿ ಮಾಗಿಸಲಾದ ಹಾಗೂ ಉತ್ತಮ ಗುಣಮಟ್ಟದ ವಿವಿಧ ತಳಿಗಳ ಮಾವುಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಾಗಲಿವೆ ಎಂದು ತಿಳಿಸಿದರು.
ಆಲ್ಫಾನ್ಸೊ, ಬಾದಾಮಿ, ಮಲ್ಲಿಕ, ರಸಪುರಿ, ಮಲಗೋವಾ, ಸಿಂಧೂರ, ಕಾಲಪಾಡಿ, ತೋತಾಪುರಿ, ಬೆಂಗನ್ಪಲ್ಲಿ, ಶುಗರ್ ಬೇಬಿ ಸೇರಿದಂತೆ ಹಲವು ತಳಿಗಳ ಮಾವುಗಳು ಮೇಳದಲ್ಲಿ ಮಾರಾಟಕ್ಕೆ ಇರಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಮಂಗಳೂರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶರಾದ ಪ್ರವೀಣ್ ಕೆ , ಮಾವು ಬೆಳೆಗಾರರಾದ ವಾಸು , ಸಿದ್ದರಾಜು ಉಪಸ್ಥಿತರಿದ್ದರು .