ಉಡುಪಿ: ಕೋಟ ಠಾಣಾ ವ್ಯಾಪ್ತಿಯ ಸಾಸ್ತಾನದಲ್ಲಿ ನಡೆದ ಯುವಕನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ.
ಕೊಲ್ಲೂರು ಕೆಳಮನೆಯ ದೇವಿ ಪ್ರಸಾದ್ ಶೆಟ್ಟಿ ಯಾನೆ ದೀಕ್ಷಿತ್ (33), ಹಿರಿಯಡ್ಕದ ಸುಜಿತ್ (27), ಕಾಟಿಪಳ್ಳದ ಸುದೀಪ್ (22), ಕೃಷ್ಣಾಪುರ ಶ್ರೀಷಾ ಆನಂದ ಶೆಟ್ಟಿ (35), ಕೈಕಂಬ ಮಿಥುನ್ ಕೈಕಂಬ (20), ಕೆಮ್ಮಣ್ಣು ಸುಹಾಸ್ (31) ಹಾಗೂ ಹೂಡೆ ಮನೋಜ್ ವಿ. ಕೊಟ್ಯಾನ್ (34) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸಿದ್ದಾಪುರ ಗ್ರಾಮದ ಮೋಹನ ದಾಸ್ ಶೆಟ್ಟಿ ಅವರ ಪುತ್ರ ತೇಜಸ್ ಎಂಬವರನ್ನು 2025 ನವೆಂಬರ್ 19ರಂದು ಮಧ್ಯಾಹ್ನ ಸಾಸ್ತಾನದ ಕೋಸ್ಟಲ್ ಪ್ಯಾರಡೈಸ್ ಹೋಟೆಲ್ ಎದುರು ಅಪಹರಣ ಮಾಡಲಾಗಿತ್ತು. ಅಪಹರಣಕ್ಕೊಳಗಾದ ಘಟನೆಗೆ ಸಂಬಂಧಿಸಿದಂತೆ ತೇಜಸ್ ಸ್ನೇಹಿತ ಪ್ರಜ್ವಲ್ ಮಧ್ಯಾಹ್ನ ಫೋನ್ ಮೂಲಕ ಮೋಹನ್ ದಾಸ್ ಶೆಟ್ಟಿಯವರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ತೆರಳಿದಾಗ ತೇಜಸ್ನ ಕಾರು ಅಲ್ಲೇ ಪತ್ತೆಯಾಗಿತ್ತು. ಪ್ರಜ್ವಲ್ಗೆ ತೇಜಸ್ನ ವಾಟ್ಸಪ್ನಿಂದ ಬಂದ ಆಡಿಯೋ ಕಾಲ್ನಲ್ಲಿ, ಮನೋಜ್ ಕೋಡಿಕೆರೆ ಸೂಚನೆಯಂತೆ ಕೆಲವರು ತನ್ನನ್ನು ಅಪಹರಿಸಿರುವುದಾಗಿ ತೇಜಸ್ ತಿಳಿಸಿದ್ದಾನೆ. ನಂತರ ಅಪರಿಚಿತರು ವಾಟ್ಸಪ್ ಮೂಲಕ ಸಂಪರ್ಕಿಸಿ ಮೊದಲು ₹50 ಲಕ್ಷ, ಬಳಿಕ ₹3 ಕೋಟಿ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾರೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ವೇಳೆ ಆರೋಪಿಗಳು ಸಂಘಟಿತವಾಗಿ ಅಪರಾಧ ನಡೆಸಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ KCOCA ಕಾಯ್ದೆ ದಾಖಲಿಸಲಾಗಿದೆ.
ಇನ್ನೂ ಪ್ರಕರಣದ ಪ್ರಮುಖ ಆರೋಪಿಗಳಾದ ಮನೋಜ ಕೋಡಿಕೆರೆ (42) ಮತ್ತು ಚೇತನ್ ಪಡೀಲ್ (38) ತಲೆಮರೆಸಿಕೊಂಡಿದ್ದು, ಇವರ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಇಬ್ಬರ ವಿರುದ್ಧ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ.
ಈ ಆರೋಪಿಗಳ ಬಗ್ಗೆ ಮಾಹಿತಿ ಹೊಂದಿರುವವರು ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಹೆಚ್.ಡಿ. ಕುಲಕರ್ಣಿ (ಮೊಬೈಲ್: 9480805422) ಅವರನ್ನು ಸಂಪರ್ಕಿಸಲು ಪೊಲೀಸರು ಮನವಿ ಮಾಡಿದ್ದಾರೆ. ಮಾಹಿತಿ ನೀಡುವವರಿಗೆ ₹50,000 ನಗದು ಬಹುಮಾನ ನೀಡಲಾಗುವುದಾಗಿ ತಿಳಿಸಲಾಗಿದೆ. ಅಲ್ಲದೆ, ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.