ಬೆಂಗಳೂರಿನಲ್ಲಿ ಎಬೋಲಾ ಆತಂಕ: ಉಗಾಂಡಾದ ಮಹಿಳೆ ಐಸೋಲೇಷನ್‌ಗೆ ದಾಖಲು

ಬೆಂಗಳೂರು: ‘ಎಬೋಲಾ’ ಮಹಾಮಾರಿ ಬೆಂಗಳೂರಿಗೂ ಕಾಲಿಟ್ಟಿದೆಯೇ ಎಂಬ ಆತಂಕ ರಾಜ್ಯದಲ್ಲಿ ಹೆಚ್ಚಾಗಿದೆ. ಉಗಾಂಡಾದಿಂದ ಬಂದಿದ್ದ ಮಹಿಳೆಯಲ್ಲಿ ಎಬೋಲಾ ಸೋಂಕಿಗೆ ಹೋಲುವ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತುರ್ತು ಕ್ರಮ ಕೈಗೊಂಡು, ಆಕೆಯನ್ನು ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಿಸಿ ಕಟ್ಟುನಿಟ್ಟಿನ ವೈದ್ಯಕೀಯ ನಿಗಾದಲ್ಲಿ ಇರಿಸಿದೆ.

ಮಹಿಳೆಯನ್ನು ಉಗಾಂಡಾದ ರಾಜಧಾನಿ ಕಂಪಾಲ ನಿವಾಸಿ ನಗಿರೆ ಲತೀಫಾ ಎಂದು ಗುರುತಿಸಲಾಗಿದೆ. ಅವರು ಮೇ 23ರಂದು ಬೆಂಗಳೂರಿಗೆ ಆಗಮಿಸಿ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದರು ಎನ್ನಲಾಗಿದೆ.ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆ, ಅಧಿಕಾರಿಗಳು ಅವರನ್ನು ಆಂಬ್ಯುಲೆನ್ಸ್ ಮೂಲಕ ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪ್ರಸ್ತುತ ಅವರನ್ನು ಐಸೋಲೇಷನ್ ಘಟಕದಲ್ಲಿ ಇರಿಸಿ ಚಿಕಿತ್ಸೆ ಹಾಗೂ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ನೀಡಲಾಗುತ್ತಿದೆ.

ಎಬೋಲಾ ಸೋಂಕಿನ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಹಿಳೆಯ ರಕ್ತ ಹಾಗೂ ಇತರ ವೈದ್ಯಕೀಯ ಮಾದರಿಗಳನ್ನು ಸಂಗ್ರಹಿಸಿ, ಬೆಂಗಳೂರಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆ ಘಟಕದ ಮೂಲಕ ಪುಣೆಯ ವಿಶೇಷ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.ಪರೀಕ್ಷಾ ವರದಿ ಬುಧವಾರ ಲಭ್ಯವಾಗುವ ನಿರೀಕ್ಷೆಯಿದ್ದು, ವರದಿ ಬಂದ ಬಳಿಕವೇ ಸೋಂಕು ದೃಢಪಟ್ಟಿದೆಯೇ ಎಂಬುದು ಸ್ಪಷ್ಟವಾಗಲಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಉಗಾಂಡಾ ಹಾಗೂ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಸೇರಿದಂತೆ ಎಬೋಲಾ ಅಪಾಯ ಇರುವ ಆಫ್ರಿಕಾ ರಾಷ್ಟ್ರಗಳಿಂದ ಭಾರತಕ್ಕೆ ಬರುವ ಪ್ರಯಾಣಿಕರನ್ನು 21 ದಿನಗಳ ಕಾಲ ಆರೋಗ್ಯ ನಿಗಾದಲ್ಲಿಡಲಾಗುತ್ತದೆ.ಮಹಿಳೆ ಬೆಂಗಳೂರಿಗೆ ಬಂದ ಬಳಿಕ ಸಂಪರ್ಕಕ್ಕೆ ಬಂದಿರಬಹುದಾದ ವ್ಯಕ್ತಿಗಳನ್ನು ಆರೋಗ್ಯ ಇಲಾಖೆ ಗುರುತಿಸಿದ್ದು, ಅವರ ಆರೋಗ್ಯ ಸ್ಥಿತಿಯ ಮೇಲೂ ನಿಗಾ ವಹಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ಪರೀಕ್ಷೆ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ.

ಪ್ರಸ್ತುತ ಇದು ಕೇವಲ ಶಂಕಿತ ಪ್ರಕರಣವಾಗಿದ್ದು, ಪರೀಕ್ಷಾ ವರದಿ ಬರುವವರೆಗೆ ಎಬೋಲಾ ಸೋಂಕು ದೃಢಪಟ್ಟಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸಲಾಗುತ್ತಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..

SHARE
Loading spinner

Leave a Reply

Your email address will not be published. Required fields are marked *

error: Content is protected !!